ಇಂದೋರ್: ನಕಲಿ ಮದುವೆಯಾದ ಬಳಿಕ ವರನ ಬಳಿಯಿದ್ದ ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡುತ್ತಿದ್ದ ಮೂವರು ಮಹಿಳೆಯರು ಸೇರಿ ನಾಲ್ವರನ್ನು ಬಂಧಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಆರೋಪಿಗಳನ್ನು ವರ್ಷಾ (27), ರೇಖಾ ಶರ್ಮಾ (40), ಸುನೀತಾ ಅಲಿಯಾಸ್ ಬಸಂತಿ (45) ಮತ್ತು ವಿಜಯ್ ಕಟಾರಿಯಾ (55) ಎಂದು ಗುರುತಿಸಲಾಗಿದೆ. ನಾಲ್ವರು ಇಂದೋರ್ ನಿವಾಸಿಗಳಾಗಿದ್ದಾರೆ. ಈ ಗ್ಯಾಂಗ್‌ನಲ್ಲಿರುವ ವರ್ಷಾ ಎಂಬಾಕೆ ವಧುವಾಗಿ ವರನಿಗೆ ಪರಿಚಯವಾಗುತ್ತಿದ್ದಳು. ಉಳಿದ ಮೂವರು ವಧುವಿನ ಕುಟುಂಬಸ್ಥರು ಎಂದು ಪರಿಚಯ ಮಾಡಿಕೊಳ್ಳುತ್ತಿದ್ದರು.
ಅದಾದ ಬಳಿಕ ವರ್ಷಾ ವರನನ್ನು ಮದುವೆಯಾಗುತ್ತಿದ್ದಳು. ಹೀಗೆ ಮದುವೆಯಾದ ಬಳಿಕ ವರನ ಬಳಿಯಿದ್ದ ಚಿನ್ನಾಭರಣ ಹಾಗೂ ನಗದನ್ನು ಕದ್ದು ನಾಪತ್ತೆಯಾಗುತ್ತಿದ್ದಳು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪೊಲೀಸರು ಮಾತನಾಡಿ, ವರ್ಷಾ ಎಂಬಾಕೆ ರಾಜಸ್ಥಾನದ ಹಾಗೂ ಮಹಾರಾಷ್ಟ್ರದ ಇಬ್ಬರು ಪುರುಷರನ್ನು ಮದುವೆಯಾಗಿದ್ದಳು. ಇಬ್ಬರ ಬಳಿಯೂ ತನ್ನ ಹೆಸರನ್ನು ಬದಲಾಯಿಸಿಕೊಂಡು ಹೇಳಿದ್ದಾಳೆ. ತನಿಖೆಯ ವೇಳೆ ಇಂತಹ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.