ರಾಯ್‍ಪುರ: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿರುವ ಘಟನೆ ಛತ್ತೀಸ್‍ಗಢದ ರಾಜಧಾನಿ ರಾಯ್‍ಪುರದಲ್ಲಿ ನಡೆದಿದೆ.
ಗುರುವಾರ ಮಧ್ಯರಾತ್ರಿ ಆರೋಪಿ ತನ್ನ ಕಾರಿನಲ್ಲಿ ಹಾಗೂ ಆಕೆಯ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ಹಾಗೂ ಆರೋಪಿ ಕಳೆದ ಕೆಲವು ತಿಂಗಳಿಂದ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ತನ್ನ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿ ಕಾನ್ಸ್‌ಟೇಬಲ್ ಬಳಿ ಹೋಗಿದ್ದಾಳೆ. ಈ ವೇಳೆ ಆತ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರು 2-3 ತಿಂಗಳಿನಿಂದ ಫೋನ್‍ನಲ್ಲಿ ಸಂಪರ್ಕದಲ್ಲಿದ್ದರು. ಇಬ್ಬರು ಒಂದೇ ಪ್ರದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ.
22 ವರ್ಷದ ಯುವತಿ ಈ ಸಂಬಂಧ ರಾಯ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಅಡಿ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ಕೋರ್ಟ್ ಆರೊಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಸಂಬಂಧ ಬಿಎನ್‍ಎಸ್ ಸೆಕ್ಷನ್ 64 ಮತ್ತು 351(2) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.