ಆಂಧ್ರಪ್ರದೇಶ: ತಿರುಪತಿಯ ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬಿನಾಂಶ ಪತ್ತೆಯಾದ ಹಿನ್ನಲೆ, ದೇಶದಾದ್ಯಂತ ಭಕ್ತಾದಿಗಳು ಆಘಾತಕ್ಕೀಡಾಗಿದ್ದು, ಇನ್ಮುಂದೆ ರಾಜ್ಯದ ಯಾವುದೇ ದೇವಾಲಯದಲ್ಲಿ ತಿರುಪತಿಯ ಲಡ್ಡು ಪ್ರಸಾದವನ್ನು ಬಳಸದಿರಲು ಕರ್ನಾಟಕದ ಅರ್ಚಕರ ಒಕ್ಕೂಟ ನಿರ್ಧಾರ ಕೈಗೊಂಡಿದೆ.
ರಾಜ್ಯದ ವಿವಿಧ ದೇವಾಲಯಗಳಲ್ಲಿ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದವನ್ನು ಪ್ರಧಾನವಾಗಿ ಬಳಸಲಾಗುತ್ತಿತ್ತು. ಆದರೆ ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನಾಂಶ ಪತ್ತೆಯಾದ ಆಘಾತಕಾರಿ ಮಾಹಿತಿ ಹಿನ್ನಲೆ, ಭಕ್ತಾದಿಗಳ ಹಿತದೃಷ್ಟಿಯಿಂದ, ಲಡ್ಡು ಪ್ರಸಾದದ ಪಾವಿತ್ರ್ಯತೆ ಬಗ್ಗೆ ಖಚಿತತೆ ಸಿಗುವವರೆಗೆ ಪ್ರಸಾದವನ್ನು ಬಳಸದಿರಲು ನಿರ್ಧರಿಸಲಾಗಿದೆ.
ಅಖಿಲ ಕರ್ನಾಟಕ ಅರ್ಚಕರ ಈ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಧಾರ್ಮಿಕ ದತ್ತಿ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿ, ಇನ್ಮುಂದೆ ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದದಲ್ಲಿ ಖಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ಆದೇಶಿಸಿದ್ದಾರೆ.