Bengaluru 20°C
Ad

ಶಬರಿಮಲೆ ಪವಿತ್ರ 18 ಮೆಟ್ಟಿಲುಗಳ ಮೇಲೆ ಪೊಲೀಸರ ಫೋಟೋ ಶೂಟ್: ಕೇರಳ ಹೈಕೋರ್ಟ್ ಗರಂ

ಲಕ್ಷಾಂತರ ಅಯ್ಯಪ್ಪ ಭಕ್ತರ ಪವಿತ್ರ ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ಪೊಲೀಸ್ ಸಿಬ್ಬಂದಿ ನಿಂತು ಗ್ರೂಪ್ ಫೋಟೋ ತೆಗೆದುಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಶಬರಿಮಲೆ: ಲಕ್ಷಾಂತರ ಅಯ್ಯಪ್ಪ ಭಕ್ತರ ಪವಿತ್ರ ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ಪೊಲೀಸ್ ಸಿಬ್ಬಂದಿ ನಿಂತು ಗ್ರೂಪ್ ಫೋಟೋ ತೆಗೆದುಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರವನ್ನು ಶನಿವಾರ ತೆಗೆಯಲಾಗಿದ್ದು, ಇದರಲ್ಲಿ ಸಮವಸ್ತ್ರದಲ್ಲಿರುವ ಸುಮಾರು 28 ಪೊಲೀಸರು ಗರ್ಭಗುಡಿಗೆ ಬೆನ್ನು ಮಾಡಿ ನಿಂತಿರುವುದು ಕಾಣಿಸಿದೆ.

Ad

ಇದು ದೇವಾಲಯದ ಸಂಪ್ರದಾಯ ಮತ್ತು ಭಕ್ತರ ನಂಬಿಕೆಗಳ ಉಲ್ಲಂಘನೆಯಾಗಿದೆ ಎನ್ನಲಾಗಿದೆ. ಪ್ರತಿದಿನದ ವಾಡಿಕೆಯಂತೆ ಮಧ್ಯಾಹ್ನ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಈ ಫೋಟೊ ಸೆರೆಹಿಡಿಯಲಾಗಿದೆ ಎನ್ನಲಾಗಿದೆ. ಭಕ್ತರ ಜನಸಂದಣಿ ನಿಯಂತ್ರಣಕ್ಕೆ ನಿಯೋಜಿಸಲಾದ ಪೊಲೀಸರು ಮೆಟ್ಟಿಲುಗಳ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Ad

ಶಬರಿಮಲೆ ದೇವಾಲಯದ ಪುರೋಹಿತರು ಸಹ ಗರ್ಭಗುಡಿಯ ಕಡೆಗೆ ಮುಖ ಮಾಡಿಕೊಂಡೇ ಈ 18 ಮೆಟ್ಟಿಲುಗಳನ್ನು ಇಳಿಯುತ್ತಾರೆ ಎಂಬುದು ಗಮನಾರ್ಹ. ಶಬರಿಮಲೆಯಲ್ಲಿ 18 ಮೆಟ್ಟಿಲುಗಳಿಗೆ ಅಯ್ಯಪ್ಪ ಭಕ್ತರು ಪೂಜೆ ಮಾಡಿಕೊಂಡು ಹತ್ತುತ್ತಾರೆ. ಅಂತಹ ಮೆಟ್ಟಿಲುಗಳ ಮೇಲೆ ದೇವರಿಗೆ ಬೆನ್ನು ಹಾಕಿ ಪೊಲೀಸರು ಪೋಟೋ ತೆಗೆದಿದ್ದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Ad

ಶಬರಿಮಲೆಯ ಮೆಟ್ಟಿಲುಗಳನ್ನು ಭಕ್ತರು ಪವಿತ್ರ ಎಂದೇ ನಂಬುತ್ತಾರೆ. ಭಕ್ತರು ದೇವಾಲಯಕ್ಕೆ ಏರುವ ವೇಳೆ ದೇವರಿಗೆ ಮುಖಮಾಡಿಯೇ ಏರುವ ಪದ್ಧತಿಯಿದೆ. ಆದರೆ, ಪೊಲೀಸರು ದೇವರಿಗೆ ಬೆನ್ನುಮಾಡಿ ಚಿತ್ರ ತೆಗೆಸಿಕೊಂಡಿದ್ದಾರೆ.

Ad

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಹೈಕೋರ್ಟ್, ಪೊಲೀಸ್ ಅಧಿಕಾರಿಗಳ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ದೇವಾಲಯದ ಆವರಣದ ಒಳಗೆ ಭಕ್ತರು ಮೊಬೈಲ್ ಬಳಸಿ ಚಿತ್ರೀಕರಣ ಮಾಡಿಸುವ ಕುರಿತು ಕೂಡ ಸಮಗ್ರ ವರದಿ ನೀಡುವಂತೆ ದೇವಾಲಯದ ಅಧಿಕಾರಿಗಳಿಗೆ ತಿಳಿಸಿದೆ.

Ad

ಘಟನೆ ಕುರಿತು ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಬರಿಮಲೆ ದೇವಾಲಯದ ಭದ್ರತೆಯ ಉಸ್ತುವಾರಿ ಹೆಚ್ಚುವರಿ ಡಿಜಿಪಿ ಎಸ್. ಶ್ರೀಜಿತ್ ಸೂಚನೆ ನೀಡಿದ್ದಾರೆ. “ಪೊಲೀಸರು ಪವಿತ್ರ ಮೆಟ್ಟಿಲುಗಳ ಮೇಲೆ ನಿಂತು ಚಿತ್ರೀಕರಣ ಮಾಡಿರುವುದು ಧಾರ್ಮಿಕ ನಂಬಿಕೆಗಳಿಗೆ ಘಾಸಿ ಉಂಟುಮಾಡಿದೆ’ ಎಂದು ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷ ಆರ್.ವಿ.ಬಾಬು ತಿಳಿಸಿದ್ದಾರೆ.

Ad
Ad
Ad
Nk Channel Final 21 09 2023