ನವದೆಹಲಿ: ಆರು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾರ್ಖಂಡ್ನ ಟಾಟಾನಗರದಿಂದ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು. ಹವಾಮಾನ ವೈಪರೀತ್ಯದಿಂದ ಖುದ್ದಾಗಿ ಸಮಾರಂಭ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗದ್ದರಿಂದ ವರ್ಚುವಲ್ ಮೂಲಕವೇ ಪ್ರಧಾನಿ ರೈಲುಗಳಿಗೆ ಚಾಲನೆ ನೀಡಿದರು. ಧ್ವಜಾರೋಹಣ ಸಮಾರಂಭ ಮತ್ತು ಇತರ ಕಾರ್ಯಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ನಡೆಸಲಾಯಿತು.
ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ರೈಲುಗಳು ಬೆರ್ಹಾಮ್ಪುರ್-ಟಾಟಾ, ರೂರ್ಕೆಲಾ-ಹೌರಾ, ದಿಯೋಘರ್-ಬನಾರಸ್, ಹೌರಾ-ಗಯಾ ಮತ್ತು ಹೌರಾ-ಭಾಗಲ್ ಪುರ್ ಮಾರ್ಗಗಳಲ್ಲಿ ಸಂಚರಿಸಲಿವೆ. ಒಟ್ಟಾರೆಯಾಗಿ ಪ್ರಧಾನಿ ಮೋದಿ ಇಂದು ಜಾರ್ಖಂಡ್ನಲ್ಲಿ 21,000 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
“ಜಾರ್ಖಂಡ್ನಲ್ಲಿ ಇಂದು ಕರಮ್ ಹಬ್ಬದ ಶುಭ ದಿನವಾಗಿದೆ. ಇಂದು, ನಾನು ವಿಮಾನ ನಿಲ್ದಾಣವನ್ನು ತಲುಪಿದಾಗ ಸಹೋದರಿಯೊಬ್ಬರು ನನ್ನನ್ನು ಸ್ವಾಗತಿಸಿದರು. ತಮ್ಮ ಸಹೋದರರು ಸುಖವಾಗಿರಲೆಂದು ಸಹೋದರಿಯರು ಪ್ರಾರ್ಥಿಸುವ ಹಬ್ಬ ಇದಾಗಿದೆ.” ಎಂದು ಅವರು ಹೇಳಿದರು.
ಜಾರ್ಖಂಡ್ನ ಪ್ರಗತಿಗೆ ಕೇಂದ್ರದ ಬದ್ಧತೆಯನ್ನು ಎತ್ತಿ ತೋರಿಸಿದ ಅವರು,”ಆರು ಹೊಸ ವಂದೇ ಭಾರತ್ ರೈಲುಗಳು, 650 ಕೋಟಿ ರೂ. ಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಾವಿರಾರು ಜನರಿಗೆ ವಸತಿಯೊಂದಿಗೆ ಜಾರ್ಖಂಡ್ನಲ್ಲಿ ಇಂದು ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ” ಎಂದು ಹೇಳಿದರು. ಆಧುನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳ ವಿಷಯದಲ್ಲಿ ಜಾರ್ಖಂಡ್ ಹಿಂದುಳಿದಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಪ್ರಸ್ತುತ ಬಡವರು, ಬುಡಕಟ್ಟು ಸಮುದಾಯಗಳು, ದಲಿತರು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು ಮತ್ತು ಯುವಕರನ್ನು ಮೇಲೆತ್ತುವತ್ತ ಗಮನ ಹರಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಹೊಸ ರೈಲು ಸಂಪರ್ಕದಿಂದ ಪೂರ್ವದ ಪ್ರದೇಶಗಳಿಗಾಗುವ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಯೋಜನಗಳನ್ನು ಪ್ರಧಾನಿ ಒತ್ತಿ ಹೇಳಿದರು.