ನವದೆಹಲಿ: 2025ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವ ಪದ್ಮ ಪ್ರಶಸ್ತಿ 2025ರ ನಾಮನಿರ್ದೇಶನಗಳು ಅಥವಾ ಶಿಫಾರಸುಗಳು ಮೇ 1ರಿಂದಲೇ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 15ರವರೆಗೆ ನಾಮನಿರ್ದೇಶನಕ್ಕೆ ಅವಕಾಶ ಇರುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನಾಮನಿರ್ದೇಶನಗಳು ಅಥವಾ ಶಿಫಾರಸುಗಳು ಮೇಲೆ ಹೇಳಿದ ಪೋರ್ಟಲ್‌ನಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿರ್ದಿಷ್ಟವಾದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು, ನಿರೂಪಣಾ ರೂಪದಲ್ಲಿ (ಗರಿಷ್ಠ 800 ಪದಗಳು) ಉಲ್ಲೇಖವನ್ನು ಒಳಗೊಂಡಂತೆ ನಾಮನಿರ್ದೇಶನಗೊಳ್ಳುವ ವ್ಯಕ್ತಿಯ ಸೇವೆಯಲ್ಲಿ ಶಿಫಾರಸು ಮಾಡಲ್ಪಟ್ಟಿರುವ ಆಯಾ ಕ್ಷೇತ್ರದ ವಿಶಿಷ್ಟವಾದ ಮತ್ತು ಅಸಾಧಾರಣವಾದ ಸಾಧನೆಗಳನ್ನು ಅಥವಾ ಸೇವೆಯನ್ನು ಸ್ಪಷ್ಟವಾಗಿ ತಿಳಿಸಬೇಕು.
ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳ ಕೊನೆಯ ದಿನಾಂಕ ಸೆಪ್ಟೆಂಬರ್ 15. ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಗಳು ಅಥವಾ ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್‌ನಲ್ಲಿ (https://awards.gov.in) ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗುತ್ತದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ದಿನದಂದು ಘೋಷಿಸಲಾಗುವುದು. ಇವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸೇರಿವೆ.
1954ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಈ ಪ್ರಶಸ್ತಿಯನ್ನು ‘ವಿಶಿಷ್ಟತೆಯ ಕೆಲಸವನ್ನು’ ಗುರುತಿಸುವ ಸಲುವಾಗಿ ನೀಡಲಾಗುತ್ತದೆ. ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ ಮುಂತಾದ ಎಲ್ಲಾ ಕ್ಷೇತ್ರಗಳು ಅಥವಾ ವಿಭಾಗಗಳಲ್ಲಿನ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು ಅಥವಾ ಸೇವೆಗಳಿಗಾಗಿ ಈ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ.