ಮಲಪ್ಪುರಂ: ಇತ್ತೀಚೆಗಷ್ಟೇ ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ 24 ವರ್ಷದ ವ್ಯಕ್ತಿಗೆ ನಿಪಾ ವೈರಸ್ ಸೋಂಕು ತಗುಲಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಪ್ರಾದೇಶಿಕ ವೈದ್ಯಾಧಿಕಾರಿ ನಡೆಸಿದ ಸಾವಿನ ತನಿಖೆ ಬಳಿಕ ನಿಪಾ ಸೋಂಕಿನ ಶಂಕೆ ವ್ಯಕ್ತವಾಗಿ ಮಾದರಿಗಳನ್ನು ತಕ್ಷಣವೇ ಪರೀಕ್ಷೆಗೆ ಕಳುಹಿಸಿದಾಗ ನಿಪಾ ದೃಢಪಟ್ಟಿತು ಎಂದು ಸಚಿವೆ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ರಾಜ್ಯಕ್ಕೆ ಆಗಮಿಸಿದ ಮಲಪ್ಪುರಂ ಮೂಲದವರು ಕಳೆದ ಸೆಪ್ಟೆಂಬರ್ 9 ರಂದು ನಿಧನರಾಗಿದ್ದರು. ನಂತರ ಅವರ ಲಭ್ಯವಿರುವ ಮಾದರಿಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಫಲಿತಾಂಶದಲ್ಲಿ ಪಾಸಿಟಿವ್ ಬಂದಿತ್ತು ಎಂದು ಮಲಪ್ಪುರಂ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ, ನಂತರ ಆರೋಗ್ಯ ಸಚಿವೆ ನಿನ್ನೆ ರಾತ್ರಿಯೇ ಉನ್ನತ ಮಟ್ಟದ ಸಭೆಯನ್ನು ನಡೆಸಿದರು ಮತ್ತು ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮಗಳನ್ನು ಪ್ರಾರಂಭಿಸಿದರು.
Ad