ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ಕೊಡಬೇಕು ಎಂದು ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ ಮಾತುಗಳು ಇಂದು ಸತ್ಯವಾಗಿದೆ. ಒಂದು ವ್ಯವಸ್ಥಿತ ರೂಪದಲ್ಲಿ ಚುನಾವಣ ಬಾಂಡ್ ಬಿಜೆಪಿಗೆ ನೀಡಲಾಗಿದೆ. ಇಡಿ ದಾಳಿ ನಡೆಸಿದ ಕೂಡಲೇ ಅಥವಾ ಬಂಧನದ ಬಳಿಕ ಬಾಂಡ್ ಖರೀದಿಸಿದೆ. ಹಲವಾರು ಪ್ರಕರಣಗಳಲ್ಲಿ ಇದೇ ರೀತಿಯಾಗಿದೆ.
ಚುನಾವಣಾ ಬಾಂಡ್ ಖರೀದಿಸಿ ಬಿಜೆಪಿಗೆ ನೀಡಿದ ಮೇಲೆ ಇಡಿ ಮೌನವಾಗಿದೆ. ಇನ್ನೊಂದು ಕಂಪನಿ ಬಿಜೆಪಿಗೆ ಬಾಂಡ್ ನೀಡಿ ಕೇಂದ್ರ ಸರ್ಕಾರದಿಂದ ದಕ್ಷಿಣ ಭಾರತದಲ್ಲಿ ಸಾಕಷ್ಟು ಟೆಂಡರ್ ಪಡೆದುಕೊಂಡಿದೆ. 500 ಕೋಟಿಗೂ ಅಧಿಕ ಬಾಂಡ್‌ಗಳನ್ನು ಒಂದೊಂದು ಕಂಪನಿ ಖರೀದಿಸಿದೆ. ಈಗ ಬೆಂಗಳೂರಿನಲ್ಲಿ ಇದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಎಫ್‌ಐಆರ್ ಸುಮ್ಮನೆ ಆಗಿಲ್ಲ, ಪ್ರಾಥಮಿಕ ತನಿಖೆ ಬಳಿಕ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಸೂಚಿಸಿದೆ. ಹಣಕಾಸು ಸಚಿವರು ಮೊದಲ ಆರೋಪಿ, ಇಡಿ ಎರಡನೇ ಆರೋಪಿ, ರಾಜ್ಯ ಬಿಜೆಪಿ ನಾಯಕರು ಮೂರನೇ ಆರೋಪಿಯಾಗಿದ್ದಾರೆ. 8,000 ಕೋಟಿ ಬಾಂಡ್ ರೂಪದಲ್ಲಿ ಪಡೆಯಲಾಗಿದೆ. ಕಾರ್ಪೊರೇಟ್ ಕಂಪನಿಗಳ ಮೂಲಕ ಹಣ ಪಡೆಯಲಾಗಿದೆ ಎಂದು ಆರೋಪಿಸಿದರು. ಕೋರ್ಟ್ ನಿರ್ದೇಶನದಂತೆ ಎಫ್‌ಐಆರ್ ಆಗಿದೆ. ಕೇಂದ್ರ ಹಣಕಾಸು ಸಚಿವೆ ರಾಜೀನಾಮೆ ನೀಡಬೇಕು. ಹಣಕಾಸು ಸಚಿವೆಯ ರಾಜೀನಾಮೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.