ಹೈದರಾಬಾದ್: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಡಿಸಿಎಂ ನಟ ಪವನ್ ಕಲ್ಯಾಣ್ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಡಿಸಿಎಂ ಪವನ್ ಕಲ್ಯಾಣ್, ನನ್ನ ಮಕ್ಕಳು ಸಂಪ್ರದಾಯಸ್ಥ ಕ್ರೈಸ್ತರು ಎಂದಿದ್ದಾರೆ. ನಾನು ಚರ್ಚ್‌ಗೆ ಹೋಗುತ್ತೇನೆ. ನಾನು ಬ್ಯಾಪ್ಟೈಜ್ ಆಗಿದ್ದೇನೆ. ಯೇಸುವಿನ ಜನ್ಮಸ್ಥಳವಾದ ಬೆಥ್ ಲೆಹೆಮ್ಗೆ ಭೇಟಿ ನೀಡಿದ್ದೇನೆ ಎಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಗತ್ತಿನ ಪ್ರಸಿದ್ಧ ದೇಗುಲ ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಹಾಲಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ತಿಮ್ಮಪ್ಪನ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಇತ್ತು ಎಂದು ಲ್ಯಾಬ್ ರಿಪೋರ್ಟ್ ಧೃಡಪಡಿಸಿತ್ತು. ಈ ವಿಚಾರದಲ್ಲಿ ಯಾಕೆ ರಾಜಕೀಯ ಮಾಡುತ್ತೀರಿ? ಎಂದು ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ನಟ ಪ್ರಕಾಶ್ ರಾಜ್ ಕೆಂಡಕಾರಿದ್ದರು. ಈಗ ಪ್ರಕಾಶ್ ರಾಜ್ಗೆ ಪವನ್ ಕಲ್ಯಾಣ್ ಸ್ಟ್ರಾಂಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತಾಡಿದ ಡಿಸಿಎಂ ಪವನ್ ಕಲ್ಯಾಣ್, ಇತ್ತೀಚೆಗೆ ಪ್ರಕಾಶ್ ರಾಜ್ ತಿರುಪತಿ ಲಡ್ಡು ವಿಚಾರದ ಬಗ್ಗೆ ಮಾತಾಡಿದ್ದಾರೆ. ನನ್ನ ಧರ್ಮಕ್ಕೆ ಅನ್ಯಾಯವಾದ್ರೆ ಮಾತನಾಡುವುದರಲ್ಲಿ ತಪ್ಪೇನಿದೆ? ನಾನು ಯಾವ ಧರ್ಮದ ವಿರುದ್ಧವೂ ಇಲ್ಲ. ಇದನ್ನು ಪ್ರಕಾಶ್ ರಾಜ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪವನ್ ತಿರುಗೇಟು ನೀಡಿದರು.
ನನಗೆ ಪ್ರಕಾಶ್ ರಾಜ್ ಅವರ ಬಗ್ಗೆ ಅಪಾರವಾದ ಗೌರವ ಇದೆ. ಜಾತ್ಯತೀತತೆ ಬಗ್ಗೆ ಮಾತಾಡೋ ಜನ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳು ಬಹಳ ನೋವನ್ನು ಅನುಭವಿಸುತ್ತಿದ್ದೇವೆ. ಯಾರಾದ್ರೂ ನಮ್ಮ ಬಗ್ಗೆ ಮಾತಾಡೋ ಮುನ್ನ ನೂರು ಸಲ ಯೋಚಿಸಬೇಕು. ನಮ್ಮ ಭಾವನೆಗಳಿಗೆ ಧಕ್ಕೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನೇ ಇರುವುದಿಲ್ಲ ಎಂದರು.
ಪವನ್ ಅವರ 3ನೇ ಪತ್ನಿ ಹೆಸರು ಅನ್ನಾ ಲೆಜ್ನೆವಾ. ಇವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ರಷ್ಯಾದ ಮಾಡೆಲ್ ಆದ ಇವರು 2011ರಲ್ಲಿ ತೀನ್ ಮಾರ್ ಚಿತ್ರದ ಶೂಟಿಂಗ್ನಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರು ಪ್ರೀತಿಸಿ 2013ರಲ್ಲಿ ವಿವಾಹವಾದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಕ್ರಿಶ್ಚಿಯನ್ ಆಗಿದ್ದಾರೆ.