ನವದೆಹಲಿ: ರಷ್ಯಾ ಮತ್ತು ಆಸ್ಟ್ರಿಯಾ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
ಮೊದಲು (ಜುಲೈ 8) ರಷ್ಯಾಕ್ಕೆ ಭೇಟಿ ನೀಡಿದ ಮೋದಿ, 22ನೇ ರಷ್ಯಾ-ಭಾರತ ಶೃಂಗಸಭೆಯಲ್ಲಿ ಭಾಗವಹಿಸಿದರು.
ಉಕ್ರೇನ್-ರಷ್ಯಾ ಸಂಘರ್ಷದ ನಂತರ ಪ್ರಧಾನಿ ಮೋದಿ ಅವರ ಮೊದಲ ರಷ್ಯಾ ಪ್ರವಾಸ ಇದಾಗಿತ್ತು. ಇದೇ ವೇಳೆ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಪ್ರಸ್ತಾಪಿಸಿದ ಮೋದಿ, ಯುದ್ಧಭೂಮಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದು. ಬಾಂಬ್, ಬಂದೂಕು, ಗುಂಡುಗಳ ನಡುವೆ ಶಾಂತಿ ಮಾತುಕತೆ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಮಾಸ್ಕೊ ಪ್ರವಾಸದ ಬಳಿಕ ಮೋದಿ ಆಸ್ಟ್ರೀಯಾ ಪ್ರವಾಸವನ್ನು ಕೈಗೊಂಡಿದ್ದು, ಅಲ್ಲಿ ಆಸ್ಟ್ರಿಯಾ ಗಣರಾಜ್ಯದ ಚಾನ್ಸೆಲರ್ ಕಾರ್ಲ್ ನೆಹಮ್ಮೆರ್ ಮತ್ತು ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಭೇಟಿ ಮಾಡಿದರು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.
40 ವರ್ಷದ ಬಳಿಕ ಆಸ್ಟ್ರಿಯಾಕ್ಕೆ ಭೇಟಿ ನೀಡಿದ ಭಾರತದ ಪ್ರಧಾನಿ ಎಂಬ ಹಿರಿಮೆಗೂ ಮೋದಿ ಪಾತ್ರರಾಗಿದ್ದಾರೆ.