ಭುವನೇಶ್ವರ: ಒಡಿಶಾದ ವಿವಿಧ ಭಾಗಗಳಲ್ಲಿ ಶನಿವಾರ ಮಿಂಚು ಹೊಡೆದು ಸುಮಾರು 9 ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮಯೂರ್‌ಭಂಜ್, ಬಾಲಸೊರೆ ಮತ್ತು ಭದ್ರಕ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಕೈಂಜ್ಹರ್, ಧೆನ್ಕನಲ್ ಮತ್ತು ಗಂಜಮ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ
ಘಟನೆಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಜತೆಗೆ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಬಾರ್ಪಾಲಿ ಬ್ಲಾಕ್‌ನ ಮುನುಪಾಲಿ ಗ್ರಾಮದ ಬಳಿಯ ಹೊಲದಲ್ಲಿ ಸಿಡಿಲು ಬಡಿದು 12 ಜನರು ಗಾಯಗೊಂಡಿದ್ದಾರೆ ಎಂದು ಬಾರ್ಗರ್ ಜಿಲ್ಲೆಯ ವರದಿ ತಿಳಿಸಿದೆ. ಗಾಯಗೊಂಡ 12 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.