ರುದ್ರಪ್ರಯಾಗ: ಧಾರಾಕಾರ ಮಳೆಗೆ ಸೋನ್‌ಪ್ರಯಾಗ ಪ್ರದೇಶದ ಬಳಿ ಭೂಕುಸಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 5 ಜನರು ಸಾವನ್ನಪ್ಪಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ವರುಣನ ಆರ್ಭಟದಿಂದ ಸೋನ್‌ಪ್ರಯಾಗ ಪ್ರದೇಶದ ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಐವರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಹಾಗೂ ಮೂವರು ಗಾಯಗೊಂಡಿದ್ದಾರೆ ಎಂದು ರುದ್ರಪ್ರಯಾಗ ಹೆಚ್ಚುವರಿ ಜಿಲ್ಲಾಧಿಕಾರಿ ಶ್ಯಾಮ್ ಸಿಂಗ್ ರಾಣಾ ತಿಳಿಸಿದ್ದಾರೆ.
ಕೇದಾರನಾಥಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳ ತಂಡವೊಂದು ಭೂಕುಸಿತದಲ್ಲಿ ಸಿಲುಕಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ಆಡಳಿತ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮಧ್ಯಪ್ರದೇಶದ ಧಾರ್‌ನಿಂದ ಗೋಪಾಲ್ (50),ಘಾಟ್ ಜಿಲ್ಲೆಯ ದುರ್ಗಾಬಾಯಿ ಖಾಪರ್ (50), ವೈದೇಹಿ ಗ್ರಾಮದ ತಿತ್ಲಿ ದೇವಿ (70), ಧಾರ್‌ನ ಸಮನ್ ಬಾಯಿ (50) ಮತ್ತು ಗುಜರಾತ್‌ನ ಸೂರತ್‌ನ ಭರತ್ ಭಾಯಿ ನಿರಾಲಾಲ್ (52) ಮೃತ ದುರ್ದೈವಿಗಳಾಗಿದ್ದಾರೆ.