Bengaluru 22°C
Ad

ಇನ್ನೂ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ; ಹರಿದ್ವಾರದಲ್ಲಿ ಮಹತ್ವದ ಸಭೆ

ಹರಿದ್ವಾರ: ದಕ್ಷಿಣ ಭಾರತದ ಜೀವನದಿಯಾದ ಕಾವೇರಿ ನದಿಗೂ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ದಸರಾ ಸಂದರ್ಭದಲ್ಲೇ ಪ್ರಾಯೋಗಿಕವಾಗಿ ನಡೆಸಲು ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕಾವೇರಿ ಆರತಿ ಸಂಚಾಲಕರೂ ಆಗಿರುವ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಉತ್ತರ ಭಾರತದಲ್ಲಿ ಎರಡು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿದ್ದು ಮೊದಲ ದಿನವಾದ ಶುಕ್ರವಾರ ಸಂಜೆ ಉತ್ತರಾ ಖಂಡ ರಾಜ್ಯದ ಹರಿದ್ವಾರದಲ್ಲಿ ನಡೆದ ಗಂಗಾರತಿ ಯಲ್ಲಿ ಪಾಲ್ಗೊಂಡಿತಲ್ಲದೆ, ಗಂಗಾರತಿ ಮಹಾ ಸಭಾದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿತು.

ಕಾವೇರಿ ನದಿಯ ಯಾವ ಜಾಗದಲ್ಲಿ ಗಂಗಾರತಿ ಮಾದರಿಯ ಆರತಿ ಕೈಗೊಳ್ಳಬೇಕು? ಅದಕ್ಕಾಗಿ ಯಾವೆಲ್ಲ ಮೂಲಸೌಕರ್ಯ ಒದಗಿಸಬೇಕು? ಖರ್ಚು-ವೆಚ್ಚ ಇತ್ಯಾದಿಗಳನ್ನು ಅಂದಾಜಿಸುವ ಸಲುವಾಗಿ ಗಂಗಾರತಿ ಮಹಾಸಭೆಯ ಸಲಹೆಗಳನ್ನು ಪಡೆಯಲಾಯಿತು.

ಸಹಸ್ರಾರು ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಹರಿದ್ವಾರದ ಹರ್‌ ಕೀ ಪೌಡಿಯಲ್ಲಿ ಪ್ರತಿ ದಿನ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಗಂಗಾರತಿ ನಡೆಯುತ್ತದೆ. ನಿತ್ಯವೂ ಸಂಜೆ ನಡೆಯುವ ಆರತಿಯಲ್ಲಿ ಸಾವಿರಾರು ಜನರು ಭಾಗಿಯಾಗಿ ಕಣ್ತುಂಬಿಕೊಳ್ಳುತ್ತಾರೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ಮಹಾಸಭಾ ಮಹಾಮಂತ್ರಿ ತನ್ಮಯ ವಸಿಷ್ಠ ವಿವರಿಸಿದರು.

ಅಷ್ಟೇ ಅಲ್ಲದೆ, ಇದರಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ ಅವರು, ಧಾರ್ಮಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಗಂಗಾರತಿ ನಡೆಯಲಿದೆ. ಗಂಗಾರತಿಗೂ ಮುನ್ನ ಗಂಗಾ ಅಭಿಷೇಕ ನೆರವೇರಿಸಿ, ನದಿ ತೀರದಲ್ಲಿ ನೆರೆದ ಸಾವಿರಾರು ಮಂದಿಯಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಗುತ್ತದೆ. ಆಬಳಿಕ ಆರತಿ ಮಾಡಲಾಗುತ್ತದೆ ಎಂದು ನಿಯೋಗದ ಮುಂದೆ ಮಾಹಿತಿ ಹಂಚಿಕೊಂಡರು.

 

Ad
Ad
Nk Channel Final 21 09 2023