ನವದೆಹಲಿ: ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಜಮೈಕಾದ ಪ್ರಧಾನಿ ಆ್ಯಂಡ್ರ‍್ಯೂ ಹೋಲ್ನೆಸ್ ಸೋಮವಾರದಿಂದ ನಾಲ್ಕು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಹೋಲ್ನೆಸ್ ಬಹುಪಕ್ಷೀಯ ಸಭೆಗಳಲ್ಲಿ ಹಲವಾರು ಬಾರಿ ಭೇಟಿಯಾಗಿದ್ದರು. ಹೋಲ್ನೆಸ್ ಭೇಟಿ ವೇಳೆ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಮಾತುಕತೆ ನಡೆಸಲಿದ್ದಾರೆ. ಜಮೈಕಾ ಪ್ರಧಾನಿಯ ಭಾರತ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುತ್ತದೆ. ಆರ್ಥಿಕ ಸಹಕಾರವನ್ನು ಹೆಚ್ಚಿಸುತ್ತದೆ ಮತ್ತು ಜಮೈಕಾ-ಭಾರತದ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಈ ಭೇಟಿಯು ಪ್ರಧಾನ ಮಂತ್ರಿ ಹೋಲ್ನೆಸ್‌ಗೆ ಇತರ ಗಣ್ಯರನ್ನು ಭೇಟಿ ಮಾಡಲು ಮತ್ತು ವ್ಯಾಪಾರ ಮತ್ತು ಉದ್ಯಮದ ಮುಖಂಡರೊಂದಿಗೆ ಸಂವಾದ ನಡೆಸಲು ಅವಕಾಶವನ್ನು ಒದಗಿಸುತ್ತದೆ. ಜಮೈಕಾ ಪ್ರಧಾನಿ ಭೇಟಿಯ ಸಮಯದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಪೂರಕವಾದ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಎಂಇಎ ಹೇಳಿದೆ.