ಹೈದರಾಬಾದ್: ಇಂದು ಗಣೇಶ ಚತುರ್ಥಿ ಹಬ್ಬದ ಸಡಗರ, ಸಂಭ್ರಮ. ಗೌರಿ, ಗಣಪತಿಯ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ಯಾವುದೇ ಅಡೆತಡೆ ಬಾರದಂತೆ ಸಮೃದ್ಧಿಯನ್ನು ದಯಪಾಲಿಸು ಎಂದು ವಿಘ್ನ ನಿವಾರಕನ ಬಳಿ ಭಕ್ತರು ಕೋರಿಕೊಳ್ಳುತ್ತಾರೆ. ದೇಶದಾದ್ಯಂತ ಅತ್ಯಂತ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ದೇಶದ ಅತಿ ದೊಡ್ಡ ಗಣಪತಿ ಮೂರ್ತಿ ಎಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ ಎಂದರೆ ಅದು ತೆಲಂಗಾಣದ ಹೈದರಾಬಾದ್ ಎಂದು ಹೇಳಲಾಗುತ್ತಿದೆ.
ಬೆಂಗಳೂರು, ಮುಂಬೈ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳು ಗಣೇಶನ ಉತ್ಸವಕ್ಕೆ ಬಾರೀ ಹೆಸರು ಪಡೆದುಕೊಂಡಿವೆ. ಇವುಗಳ ಜೊತೆಗೆ ಹೈದರಾಬಾದ್ನಲ್ಲೂ ಗಣೇಶ ಉತ್ಸವ ಜೋರಾಗಿ ನಡೆಯುತ್ತದೆ. ಆದರೆ ಹೈದರಾಬಾದ್ನ ಖೈರತಾಬಾದ್ನಲ್ಲಿ 70ನೇ ವರ್ಷದ ಗಣೇಶೋತ್ಸವವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. 70ನೇ ವರ್ಷದ ಹಿನ್ನೆಲೆಯಲ್ಲಿ 70 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಇದು 50 ಟನ್ಗೂ ಅಧಿಕ ತೂಕವಿದೆ ಎನ್ನಲಾಗಿದೆ. ಇದಕ್ಕಾಗಿ ಕೆಲ ತಿಂಗಳುಗಳ ಮೊದಲೇ ಖೈರತಾಬಾದ್ನ ಗಣೇಶ ಉತ್ಸವ ಸಮಿತಿ ಯೋಜನೆ ರೂಪಿಸಿ ಅತಿ ದೊಡ್ಡ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿದೆ ಎಂದು ತಿಳಿದು ಬಂದಿದೆ.
ಈ 70 ಅಡಿ ಎತ್ತರದ ಗಣೇಶ ಪರಿಸರ ಸ್ನೇಹಿಯಾಗಿದ್ದಾನೆ. ಇದನ್ನು ಸಂಪೂರ್ಣವಾಗಿ ಮಣ್ಣಿನಿಂದಲೇ ತಯಾರು ಮಾಡಲಾಗಿದೆ. ಇದನ್ನು ನಿರ್ಮಾಣ ಮಾಡಲು ಸುಮಾರು 1 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಅಯೋಧ್ಯೆಯ ರಾಮಲಲ್ಲಾನನ ವಿಗ್ರದಂತೆ ಇರೋ ಮೂರ್ತಿಯನ್ನು ಈ ಗಣೇಶನ ಪಕ್ಕದಲ್ಲಿ ಇಡಲಾಗಿದೆ. ಈ ದೊಡ್ಡ ಗಣಪತಿಯ ವಿಗ್ರಹ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ. ಕೆಲವರು ಡ್ರೋನ್ ಕ್ಯಾಮೆರಾ ಬಳಸಿ ಗಣೇಶನ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ.