ನವದೆಹಲಿ: ದಕ್ಷಿಣ ಭಾರತದ ಇತರ ನಗರಗಳಿಗೆ ಹೋಲಿಸಿದರೆ ಕರ್ನಾಟಕದ ಮಹಾನಗರಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ ಎಂಬ ಗ್ರೀನ್‌ಪೀಸ್ ಸಂಸ್ಥೆ ವರದಿ ಆಧರಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠ ನೋಟಿಸ್ ನೀಡಿದೆ.
ವರದಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೀಠದ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ, ನ್ಯಾ.ಅರುಣ್ ಕುಮಾರ್ ತ್ಯಾಗಿ ಹಾಗೂ ಡಾ.ಸೆಂಥಿಲ್‌ವೆಲ್ ಅವರನ್ನೊಳಗೊಂಡ ಪೀಠವು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಹಾಗೂ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದೆ.
ಗ್ರೀನ್‌ಪೀಸ್ ಸಂಸ್ಥೆಯು ಹೈದರಾಬಾದ್, ಚೆನ್ನೈ, ಕೊಚ್ಚಿ, ಮಂಗಳೂರು, ಅಮರಾವತಿ, ವಿಜಯವಾಡ, ವಿಶಾಖಪಟ್ಟಣ, ಬೆಂಗಳೂರು, ಮೈಸೂರು ಹಾಗೂ ಪುದುಚೆರಿ ನಗರಗಳಲ್ಲಿ ಮಾಲಿನ್ಯ ಪ್ರಮಾಣದ ಅಧ್ಯಯನ ನಡೆಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರಗಳಲ್ಲಿ ಮಾಲಿನ್ಯ ಪ್ರಮಾಣ ಐದಾರು ಪಟ್ಟು ಹೆಚ್ಚು ಇದೆ.
ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ವರದಿ ಬೆಳಕು ಚೆಲ್ಲಿತ್ತು. ಈ ಪ್ರಕರಣದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ 1986ರ ನಿಯಮ ಉಲ್ಲಂಘನೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.