ನವದೆಹಲಿ: ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಆತಿಶಿ ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಮಾಯಣದ ಸಾಂಕೇತಿಕತೆಯನ್ನು ಪ್ರತಿಧ್ವನಿಸುತ್ತಾ, ನಾನಿಂದು ಭರತ ಹೊತ್ತ ಹೊರೆಯನ್ನೇ ಹೊತ್ತಿದ್ದೇನೆ. ಆತ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ನಡೆಸಿದಂತೆಯೇ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಸ್ಫೂರ್ತಿಯಲ್ಲಿ ದೆಹಲಿಯಲ್ಲಿ ಆಡಳಿತ ನಡೆಸುತ್ತೇನೆ ಎಂದರು.
ತಮ್ಮ ಪಕ್ಕದಲ್ಲಿದ್ದ ಖಾಲಿ ಕುರ್ಚಿಯನ್ನು ತೋರಿಸುತ್ತಾ, “ಅರವಿಂದ್ ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೆ ಬರುವವರೆಗೂ ಇದು ಖಾಲಿಯಾಗಿಯೇ ಇರುತ್ತದೆ ಎಂದರು. ನಾನು ದೆಹಲಿ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ಶ್ರೀರಾಮ 14 ವರ್ಷಗಳ ಕಾಲ ವನವಾಸಕ್ಕೆ ಹೋದಾಗ ಆತನ ಸಹೋದರ ಭರತನಿಗಿದ್ದ ನೋವು ಇಂದು ನನ್ನದಾಗಿದೆ. ಕೇಜ್ರಿವಾಲ್ ಅಧಿಕಾರದಿಂದ ಕೆಳಗಿಳಿಯುವ ಮೂಲಕ ರಾಜಕೀಯದಲ್ಲಿ ನಮಗೆ ಘನತೆಯ ಉದಾಹರಣೆಯಾಗಿದ್ದಾರೆ ಎಂದು ಶ್ಲಾಘಿಸಿದರು.
ದೆಹಲಿಯ ಸಾರ್ವಜನಿಕರು ನಂಬಿಕೆ ಇಡುವವರೆಗೂ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಮತ್ತೆ ಅವರನ್ನು ಸಿಎಂ ಆಗಿ ಚುನಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆತಿಶಿ ತಮ್ಮ ಐವರು ಸಚಿವರೊಂದಿಗೆ ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ದೆಹಲಿ ವಿಧಾನಸಭೆ ಅಧಿವೇಶನ ಸೆ.26 ಮತ್ತು 27ರಂದು ನಡೆಯಲಿದೆ.