ಸಾಗರ: ದೇವಸ್ಥಾನದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಶಿವಲಿಂಗ ಮಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿದು 9 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹಲವು ಮಕ್ಕಳು ಈ ದುರಂತದಲ್ಲಿ ಗಾಯಗೊಂಡಿದ್ದು, ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಪ್ರದೇಶದ ಸಾಗರ ಜಿಲ್ಲೆಯ ಶಹಪುರದಲ್ಲಿರುವ ಹರ್ದೌಲ್ ಬಾಬಾ ದೇಗುಲದ ಆವರಣದಲ್ಲಿ ಈ ದುರಂತ ನಡೆದಿದೆ.
ಮಾಹಿತಿ ಪ್ರಕಾರ, ದೇಗುಲದಲ್ಲಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಮಕ್ಕಳು ಶಿವಲಿಂಗವನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ತೊಡಗಿದ್ದ ವೇಳೆ ದೇವಸ್ಥಾನದ ಸಮೀಪದಲ್ಲೇ ಇದ್ದ ಮನೆಯೊಂದರ ಗೋಡೆ ಕುಸಿದು ಮಕ್ಕಳ ಮೇಲೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. 50 ವರ್ಷಕ್ಕಿಂತಲೂ ಹಳೆಯ ಮನೆ ಇದಾಗಿದ್ದು, ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು.
ಎಳೆಯ ಪ್ರಾಯದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ. ಸಂತ್ರಸ್ತ ಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.