ಇಂಫಾಲ: ಮಣಿಪುರದ ಸಚಿವರೊಬ್ಬರ ನಿವಾಸದ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿರುವ ಘಟನೆ ಸೋಮವಾರ ನಡೆದಿದೆ.
ಉಖ್ರುಲ್ ಜಿಲ್ಲೆಯಲ್ಲಿರುವ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕ ಕಾಶಿಂ ವಶುಮ್ ಅವರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದೆ. ಶನಿವಾರ ರಾತ್ರಿ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗ್ರೆನೇಡ್ ಸ್ಫೋಟಗೊಂಡಾಗ ಸಚಿವರು ಹಾಗೂ ಅವರ ಕುಟುಂಬದ ಸದಸ್ಯರು ಮನೆಯಲ್ಲಿ ಇರಲಿಲ್ಲ. ಗ್ರೆನೇಡ್ ಸ್ಫೋಟದಿಂದ ಸಚಿವರ ಮನೆಯ ಗೋಡೆಗಳು ಮತ್ತು ಇತರ ಭಾಗಗಳಿಗೆ ಹಾನಿಯಾಗಿದೆ. ದಾಳಿಯ ನಂತರ ಸ್ಪ್ಲಿಂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಬಿಗಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿಯ ಹೊಣೆಯನ್ನು ಇಲ್ಲಿಯವರೆಗೆ ಯಾರೂ ಹೊತ್ತುಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.