ಸರ್ಕಾರಿ ಯೋಜನೆಯ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ. ಈ ಒಂದು ರೇಷನ್ ಕಾರ್ಡ್ ಇದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಐದು ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವುದರ ಜೊತೆಗೆ ವಾರ್ಷಿಕವಾಗಿ ಸಾವಿರಾರು ರೂಪಾಯಿಗಳನ್ನು ಪಡೆಯಬಹುದು. ಆದರೆ, ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್ಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಆಹಾರ ಇಲಾಖೆಯು ವೇಗ ನೀಡಿದೆ. ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕುಟುಂಬ ತಂತ್ರಾಂಶದ ಮೊರೆ ಹೋಗಿದ್ದು, ರಾಜ್ಯದಲ್ಲಿ ಒಟ್ಟು 22,62,413 ಅನರ್ಹ ರೇಷನ್ ಕಾರ್ಡ್ಗಳು ಇರುವುದನ್ನು ತಂತ್ರಾಂಶದ ಮೂಲಕ ಪತ್ತೆ ಮಾಡಿದೆ.
14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದು
ಸರ್ಕಾರ ನಿಗದಿಪಡಿಸಿದ ಮಾನದಂಡಗಳಾದ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚಿರುವವರು, ವೈಟ್ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರು,
ಆದಾಯ ತೆರಿಗೆ ಪಾವತಿಸುವವರು, ಹಳ್ಳಿಯಲ್ಲಿ3 ಹೆಕ್ಟೇರ್ ಒಣಭೂಮಿ, ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು ಹಾಗೂ ಸರ್ಕಾರಿ, ಅರೆಸರ್ಕಾರಿ ಉದ್ಯೋಗದಲ್ಲಿರುವವರು ಸೇರಿದಂತೆ 14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆಗೆ ಆಹಾರ ಇಲಾಖೆಯು ಮುಂದಾಗಿದೆ.
4272 ಪಡಿತರ ಚೀಟಿಗಳೊಂದಿಗೆ ಕೆಜಿಐಡಿ ಜೋಡಣೆ
1,06,152 ರೇಷನ್ ಕಾರ್ಡ್ ಗಳನ್ನು ಆದಾಯ ತೆರಿಗೆ ಪಾವತಿದಾರರು ಪಡೆದುಕೊಂಡಿದ್ದು, ಆದರಲ್ಲಿ, 4272 ಪಡಿತರ ಚೀಟಿಗಳೊಂದಿಗೆ ಕೆಜಿಐಡಿ ಹೆಚ್.ಆರ್.ಎಂ.ಎಸ್.ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ- ಆಡಳಿತ ಕೇಂದ್ರ ಪತ್ತೆ ಮಾಡಿದೆ. ಇದೇ ಸಂದರ್ಭದಲ್ಲಿ ಹತ್ತು ದಿನಗಳ ಒಳಗೆ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು ಎಂದು ಎಲ್ಲಾ ಜಿಲ್ಲೆಗಳ ಜಂಟಿ ಮತ್ತು ಉಪ ನಿರ್ದೇಶಕರಿಗೆ ಆಹಾರ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.