ನವದೆಹಲಿ : 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಸರ್ಕಾರ ಮತ್ತು ಇತರ ಹಲವು ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳನ್ನು 2025 ರ ಜನವರಿ 15 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ದಿನಾಂಕ ನಿಗದಿಸಿದೆ.
ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ನೇತೃತ್ವದ ಪೀಠವು, ಮುಂದಿನ ವಿಚಾರಣೆಯ ದಿನದಂದು ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ವಿಷಯದಲ್ಲಿ ಯಾವುದೇ ಮುಂದೂಡಿಕೆ ನೀಡುವುದಿಲ್ಲ ಎಂದು ವಕೀಲರಿಗೆ ಸೂಚಿಸಿತು. ಬೆಂಕಿ ಹಚ್ಚಿದ ಪ್ರಕರಣದಲ್ಲಿ 11 ಅಪರಾಧಿಗಳ ಮರಣದಂಡನೆಗೆ ಸಂಬಂಧಿಸಿದ ವಿಷಯದಲ್ಲಿ ಮತ್ತೊಂದು ಪೀಠದ ಮುಂದೆ ವಾದಿಸಬೇಕಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಗುಜರಾತ್ ಸರ್ಕಾರದ ವಕೀಲರು ಪೀಠವನ್ನು ಕೋರಿದರು.
ಈ ವೇಳೆ ಕೋರ್ಟ್, ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿದ್ದ ಪೀಠದ ಮುಂದೆ ಅಪರಾಧಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಇದೆ. ಅದರ ವಿಚಾರಣೆಯ ಬಳಿಕ, ಪ್ರಾಸಿಕ್ಯೂಷನ್ ವಾದವನ್ನು ಆಲಿಸಿ ಎರಡನ್ನೂ ಸೇರಿಸಿ ಪ್ರಕರಣ ಮುಗಿಸಲಾಗುವುದು ಎಂದು ಹೇಳಿದರು. ಪ್ರಕರಣದ ವಿಚಾರಣೆ ಕನಿಷ್ಠ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಮುಂದಿನ ವಿಚಾರಣೆಯ ಬಳಿಕ ಯಾವುದೇ ಮುಂದೂಡಿಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ, ಗುಜರಾತ್ ಸರ್ಕಾರದ ವಕೀಲರ ಮನವಿಯನ್ನು ಪರಿಗಣಿಸಿ, ಜನವರಿ 15, 2025 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ.