ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿ ಉಗ್ರಗಾಮಿಗಳು ಮತ್ತು ಗ್ರಾಮ ಸ್ವಯಂಸೇವಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮೊಲ್ನೊಮ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಯುನೈಟೆಡ್ ಕುಕಿ ಲಿಬರೇಶನ್ ಫ್ರಂಟ್‌ಗೆ (ಯುಕೆಎಲ್‌ಎಫ್) ಸೇರಿದ ಒಬ್ಬ ಉಗ್ರಗಾಮಿ ಮತ್ತು ಅದೇ ಸಮುದಾಯದ ಮೂವರು ಗ್ರಾಮ ಸ್ವಯಂಸೇವಕರು ಮೃತಪಟ್ಟಿದ್ದಾರೆ.
ಹತ್ಯೆಗೆ ಪ್ರತೀಕಾರವಾಗಿ, ಗ್ರಾಮದ ಸ್ವಯಂಸೇವಕರು ಯುಕೆಎಲ್‌ಎಫ್ ಸ್ವಯಂಘೋಷಿತ ಅಧ್ಯಕ್ಷ ಎಸ್.ಎಸ್. ಹಾವ್‌ಕಿಪ್ ಅವರ ಮನೆಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ.
ಪಲ್ಲೆಲ್ ಪ್ರದೇಶದ ಸುಂಕ ವಸೂಲಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗುಂಡಿನ ಕಾಳಗ ನಡೆದಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದ ಮೈತೇಯಿ ಮತ್ತು ಕುಕಿ ಜನಾಂಗಗಳ ನಡುವೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.