ನವದೆಹಲಿ : ಮುಂಬರುವ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭರ್ಜರಿಯಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರು.
ಪ್ರಣಾಳಿಕೆ ರಿಲೀಸ್ ಮಾಡಿ ಮಾತನಾಡಿದ ಶಾ, ಜಮ್ಮು & ಕಾಶ್ಮೀರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ “ಮಾ ಸಮ್ಮಾನ್ ಯೋಜನೆ” ಅಡಿ ಪ್ರತಿ ಕುಟುಂಬದ ಮನೆಯ ಹಿರಿಯ ಮಹಿಳೆಗೆ ವಾರ್ಷಿಕ 18,000 ರೂಪಾಯಿ ನೀಡುವುದಾಗಿ ಘೋಷಿಸಿದರು.
ಉಜ್ವಲ ಯೋಜನೆಯಡಿ ವರ್ಷಕ್ಕೆ 2 ಉಚಿತ ಸಿಲಿಂಡರ್, ಪ್ರಗತಿ ಶಿಕ್ಷಾ ಯೋಜನೆಯಡಿ ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ 3,000 ರೂಪಾಯಿ ನೀಡಲಿದ್ದೇವೆ. J & K ದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣ ಮಟ್ಟಹಾಕುತ್ತೇವೆ ಇದು ನಮ್ಮ ಭರವಸೆ ಎಂದು ಶಾ ಹೇಳಿದರು.
ಬಿಜೆಪಿಯ 25 ಅಂಶಗಳ ಪ್ರಣಾಳಿಕೆಯ ಪ್ರಕಾರ, ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು/ಲ್ಯಾಪ್‌ಟಾಪ್‌ಗಳನ್ನು ನೀಡುವುದು, ವಿಶೇಷ ಆರ್ಥಿಕ ವಲಯ ಸ್ಥಾಪನೆ, ಶ್ರೀನಗರದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ಗುಲ್ಮಾರ್ಗ್ ಮತ್ತು ಪಹಲ್ಗಾಮ್ ಅನ್ನು ಆಧುನಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದು.
ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಉಚಿತ ವಿದ್ಯುತ್, ಪ್ರತಿ ಮನೆಗೆ ಕುಡಿಯುವ ನೀರಿನ ಸೌಲಭ್ಯ, ವೃದ್ಧರು, ವಿಧವೆಯರು, ಅಂಗವಿಕಲರಿಗೆ ಮೂರು ಪಟ್ಟು ಪಿಂಚಣಿ ಕಲ್ಪಿಸುವುದು. ಸರ್ಕಾರಿ ಕಾಲೇಜುಗಳಿಗೆ 1,000 ಹೊಸ ವೈದ್ಯಕೀಯ ಸೀಟು ಸೇರಿಸುವ ಭರವಸೆಯನ್ನು ಪ್ರಣಾಳಿಕೆ ಒಳಗೊಂಡಿದೆ ಎಂದರು. 370ನೇ ವಿಧಿ ಎಂದಿಗೂ ಹಿಂತಿರುಗಲು ನಾವು ಬಿಡಲ್ಲ ಎಂದು ಶಾ ಪ್ರತಿಪಾದಿಸಿದರು. ಜಮ್ಮು-ಕಾಶ್ಮೀರದಲ್ಲಿ ಒಟ್ಟು 3 ಹಂತಗಳಲ್ಲಿ ಸೆ.18, 25 ಮತ್ತು ಅ.1ರಂದು ಚುನಾವಣೆ ನಡೆಯಲಿದೆ.