ಪುಣೆ: ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಏರ್ಪಟ್ಟ ಸಂಘರ್ಷದಲ್ಲಿ 200 ಅಧಿಕ ಮಂದಿ ಸಾವನ್ನಪ್ಪಿದ್ದು, 60,000 ಅಧಿಕ ಮಂದಿ ಸ್ಥಳಾಂತರಗೊಂಡಿದ್ದಾರೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಆರ್‌ಎಸ್‌ಎಸ್ ಸ್ವಯಂಸೇವಕರು ಈಶಾನ್ಯ ರಾಜ್ಯದಲ್ಲಿ ಭದ್ರವಾಗಿ ನೆಲೆಸಿದ್ದು, ಎರಡು ಸಮುದಾಯಗಳ ನಡುವೆ ಶಾಂತಿ ನೆಲೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
1971 ರಲ್ಲಿ ಮಣಿಪುರದಲ್ಲಿ ಭಯ್ಯಾಜಿ ಎಂದು ಜನಪ್ರಿಯವಾಗಿರುವ ಶಂಕರ್ ದಿನಕರ್ ಕೇನ್ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಕೆಲವರು ಶಾಂತವಾಗಿರುವುದಕ್ಕಿಂತ ಮಿಂಚಿನಂತೆ ಹೊಳೆಯಬೇಕು ಎಂದು ಭಾವಿಸುತ್ತಾರೆ. ಆದರೆ ಸಿಡಿಲು ಬಡಿದ ನಂತರ ಅವರು ಮೊದಲಿಗಿಂತ ಹೆಚ್ಚು ಕತ್ತಲೆಗೆ ಸರಿಯುತ್ತಾರೆ. ಆದ್ದರಿಂದ ಕೆಲಸಗಾರರು ದೀಪಗಳಂತೆ ಉರಿಯಬೇಕು. ಅಗತ್ಯವಿದ್ದಾಗ ಹೊಳೆಯಬೇಕು ಎಂದು ಭಾಗವತ್ ಹೇಳಿದರು.
ಮಣಿಪುರದಲ್ಲಿ ಪರಿಸ್ಥಿತಿ ಕಷ್ಟಕರವಾಗಿದೆ. ಸುರಕ್ಷತೆಯ ಭರವಸೆ ಇಲ್ಲ, ಅವರ ಭದ್ರತೆಯ ಬಗ್ಗೆ ಸ್ಥಳೀಯರಿಗೆ ಅನುಮಾನವಿದೆ. ವ್ಯಾಪಾರ ಅಥವಾ ಸಾಮಾಜಿಕ ಕಾರ್ಯಕ್ಕಾಗಿ ಅಲ್ಲಿಗೆ ಹೋದವರಿಗೆ ಪರಿಸ್ಥಿತಿ ಇನ್ನಷ್ಟು ಸವಾಲಾಗಿದೆ. ಆದರೆ ಅಂತಹ ಪರಿಸ್ಥಿತಿಗಳಲ್ಲೂ ಸಹ, ಸಂಘದ ಸ್ವಯಂಸೇವಕರು ದೃಢವಾಗಿ ನೆಲೆಸಿದ್ದಾರೆ. ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾಗವತ್ ಹೇಳಿದರು.