Bengaluru 22°C
Ad

ಕೆಲಸದ ಒತ್ತಡದಿಂದ ಮಗಳ ಸಾವು; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

New Project (1)

ನವದೆಹಲಿ: ಯುವತಿಯೊಬ್ಬಳು ಕೆಲಸಕ್ಕೆ ಸೇರಿದ ನಾಲ್ಕು ತಿಂಗಳಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಅಧಿಕ ಒತ್ತಡವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕುಟುಂಬಸ್ಥರ ಆರೋಪದ ಬೆನ್ನಲ್ಲೇ ಕೇಂದ್ರ ಕಾರ್ಮಿಕ ಇಲಾಖೆ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಈ ಸಂಬಂಧ ನೋಟಿಸ್​ ಜಾರಿ ಮಾಡಿದೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಾ ಸೆಬಾಸ್ಟಿಯನ್ ಪೆರಾಯಿಲ್​ (26)​ ಎಂಬ ಯುವತಿಯ ಸಾವು ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದ್ದು, ನನ್ನ ಮಗಳಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಹೀಗಾಗಿ ಅವಳು ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದು, ಕಂಪನಿಯವರನ್ನು ಉದ್ಧೇಶಿಸಿ ಬರೆದಿರುವ ಮನಕಲುಕುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನನ್ನ ಮಗಳು ಕಂಪನಿಗೆ ಕೆಲಸ ಸೇರಿದ ನಾಲ್ಕು ತಿಂಗಳಲ್ಲೇ ಮೃತಪಟ್ಟಿದ್ದಾಳೆ. ಅವಳಿಗೆ ಕೆಲಸದ ಒತ್ತಡ ಜಾಸ್ತಿ ಇತ್ತು. ನನ್ನ ಹೃದಯ ಭಾರವಾಗಿದೆ. ನಾವು ಅನುಭವಿಸುತ್ತಿರುವ ನೋವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಬಾರದು. ಜುಲೈ 6 ರಂದು, ನನ್ನ ಪತಿ ಮತ್ತು ನಾನು, ಸಿಎ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಪುಣೆಗೆ ಬಂದಿದ್ದೆವು. ಆಕೆ ಪಿಜಿಗೆ ತಲುಪಿದಾಗ ಎದೆಯ ಸೆಳೆತದ ಬಗ್ಗೆ ದೂರು ನೀಡಿದ್ದರಿಂದ, ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ಪುಣೆಯಲ್ಲಿ ಅವಳ ಇಸಿಜಿ ನಾರ್ಮಲ್‌ ಇತ್ತು. ಮಗಳ ದಿನಚರಿ ಬಗ್ಗೆ ಹೃದ್ರೋಗ ತಜ್ಞರು, ‘ನಿಮ್ಮ ಮಗಳು ಸಾಕಷ್ಟು ಸಮಯ ನಿದ್ರೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲ’ ಎಂಬ ಆತಂಕಕಾರಿ ವಿಚಾರವನ್ನು ನಮ್ಮ ಮುಂದಿಟ್ಟರು.

ವೈದ್ಯರನ್ನು ನೋಡಿದ ನಂತರವೂ ಕೆಲಸಕ್ಕೆ ಹೋಗಬೇಕೆಂದು ಮಗಳು ಒತ್ತಾಯಿಸಿದ್ದಳು. ಆ ರಾತ್ರಿ ತನಗೆ ರಜೆ ಸಿಗುವುದಿಲ್ಲ ಎಂದಿದ್ದಳು. ಜುಲೈ 7 ರಂದು ಭಾನುವಾರ ತಡವಾಗಿ ತನ್ನ ಪಿಜಿಗೆ ಮರಳಿದ್ದಳು. ಅವಳು ಘಟಿಕೋತ್ಸವದ ದಿನ ಬೆಳಗ್ಗೆ ನಮ್ಮೊಂದಿಗೆ ಇದ್ದಳು. ಆ ದಿನವೂ ಮಧ್ಯಾಹ್ನದ ವರೆಗೆ ಮನೆಯಿಂದ ಕೆಲಸ ಮಾಡುತ್ತಿದ್ದಳು. ಮಗಳು ಸಂಪೂರ್ಣ ದಣಿದ ಸ್ಥಿತಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಮಲಗುತ್ತಿದ್ದಳು. ತನ್ನ ಕೆಲಸದ ಗಡುವನ್ನು ಪೂರೈಸಲು ತುಂಬಾ ಪ್ರಯತ್ನಿಸುತ್ತಿದ್ದಳು.

ಅವಳು ಛಲಗಾರ್ತಿ. ಯಾವುದೇ ಕೆಲಸವನ್ನು ಸುಲಭಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹೊಸ ಹೊಸ ವಿಚಾರಗಳನ್ನು ಕಲಿಯಲು ತುಂಬಾ ಆಸಕ್ತಿ ವಹಿಸುತ್ತಿದ್ದಳು. ಆದರೆ ಅತಿಯಾದ ಕೆಲಸದ ಒತ್ತಡ ಅವಳಿಗೆ ಈ ಪರಿಸ್ಥಿತಿ ತಂದಿತು. ನನ್ನ ಮಗಳ ಅಂತ್ಯಕ್ರಿಯೆ ವೇಳೆ ಕಂಪನಿಯಿಂದ ಯಾರೊಬ್ಬರು ಕೂಡ ಬಂದಿರಲಿಲ್ಲ. ಸಂಸ್ಥೆಗಾಗಿ ದುಡಿದ ಉದ್ಯೋಗಿಯೊಬ್ಬರ ಅಂತ್ಯಕ್ರಿಯೆಗೆ ಬಾರದೇ ಇದ್ದದ್ದು ಮನಸ್ಸಿಗೆ ನೋವು ತಂದಿದೆ ಎಂದು ಅನ್ನಾ ತಾಯಿ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಅನ್ನಾ ಸೆಬಾಸ್ಟಿಯನ್‌ ಸಾವಿನ ವಿಚಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಸಾವಿನ ಕುರಿತ ದೂರನ್ನು ಕೈಗೆತ್ತಿಕೊಂಡಿದ್ದು, ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ.

Ad
Ad
Nk Channel Final 21 09 2023