ಧರ್ಮಶಾಲಾ: ಹಿಮಾಚಲ ಪ್ರದೇಶದ 3 ಜಿಲ್ಲೆಗಳಲ್ಲಿ ಕಂಡುಬಂದ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹ ದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಭಾನುವಾರ 4 ಮೃತದೇಹ ಪತ್ತೆಯಾಗಿದೆ. ಕಾಣೆಯಾದ 40ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಜುಲೈ 31ರ ರಾತ್ರಿ ಹಿಮಾಚಲ ಪ್ರದೇಶದ ಕುಲ್ಲುವಿನ ನಿರ್ಮಾಂಡ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾದ ರಾಂಪುರ ಉಪವಿಭಾಗದಲ್ಲಿ ಸರಣಿ ಮೇಘಸ್ಫೋಟ ಸಂಭವಿಸಿತ್ತು. ಕಳೆದ ಐದು ದಿನಗಳಲ್ಲಿ ಉಂಟಾದ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿನ ಒಟ್ಟು 87 ರಸ್ತೆಗಳ ಸಂಚಾರ ನಿರ್ಬಂಧಿಲಾಗಿದೆ.
ಯಂತ್ರೋಪಕರಣಗಳು, ಸ್ನಿಫರ್ ಶ್ವಾನದಳ, ಡ್ರೋನ್ ಮತ್ತು ಇತರ ಉಪಕರಣಗಳ ಮೂಲಕ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಶಿಮ್ಲಾ ಮತ್ತು ಕುಲ್ಲು ಗಡಿಯಲ್ಲಿರುವ ಸಮೇಜ್, ಧಾರಾ ಸರ್ದಾ ಮತ್ತು ಕುಶ್ವಾ ಎಂಬ ಮೂರು ಹಳ್ಳಿಗಳಲ್ಲಿ ದುರಂತ ಸಂಭವಿಸಿದಾಗಿನಿಂದ ವಿದ್ಯುತ್ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ವಿದ್ಯುತ್ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಬಿಪಿ, ಸಿಐಎಸ್ಎಫ್, ಹಿಮಾಚಲ ಪ್ರದೇಶ ಪೊಲೀಸ್ ಮತ್ತು ಗೃಹರಕ್ಷಕ ದಳದ 410 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ʼʼಹೆಚ್ಚುವರಿಯಾಗಿ ಇನ್ನೂ 4 ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಶೋಧ ಕಾರ್ಯಕ್ಕೆ ವೇಗ ಸಿಕ್ಕಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಂಪುರ ಉಪವಿಭಾಗದ ಸಮೇಜ್ ಗ್ರಾಮದ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಬುಧವಾರ ರಾತ್ರಿ ಹಠಾತ್ ಪ್ರವಾಹ ಸಂಭವಿಸಿದಾಗಿನಿಂದ ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ ಮತ್ತು ರಸ್ತೆಗಳು ಸಹ ಹಾನಿಗೊಳಗಾಗಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಸೋಮವಾರ ಸಮೇಜ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸಂಸತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದರು.