ಹೊಸದಿಲ್ಲಿ: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಎನ್ ಡಿಎ ಮೈತ್ರಿಕೂಟಕ್ಕೆ ಸೇರಿದ್ದಾರೆ ಎಂದು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಜಿ ಹೇಳಿದ್ದಾರೆ. ಇದರಿಂದ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
ಜಿತನ್ ರಾಮ್ ಮಾಂಜಿ ಅವರ ಪಕ್ಷವಾದ ಹಿಂದೂಸ್ಥಾನಿ ಅವಾಮ್ ಮಾಂಜಿ ಕೂಡಾ ಬಿಜೆಪಿ ನೇತೃತ್ವದ ಎನ್ ಡಿಎದ ಭಾಗವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಪೋಸ್ಟ್ ಮಾಡಿರುವ ಮಾಂಝಿ, ಚಂಪೈ ಸೊರೆನ್ ಹುಲಿಯಾಗಿದ್ದರು ಮತ್ತು ಹುಲಿಯಾಗಿಯೇ ಉಳಿಯುತ್ತಾರೆ ಎಂದಿದ್ದಾರೆ. ಬಿಹಾರದಿಂದ ಬೇರ್ಪಟ್ಟು ಪ್ರತ್ಯೇಕ ಜಾರ್ಖಂಡ್ ರಾಜ್ಯವನ್ನು ರಚಿಸುವಲ್ಲಿ ಚಂಪೈ ಸೊರೆನ್ ಅವರ ಪಾತ್ರಕ್ಕಾಗಿ ಅವರನ್ನು ಟೈಗರ್ ಎಂದು ಕರೆಯಲಾಗುತ್ತದೆ.
ಈ ವರ್ಷದ ಜನವರಿಯಲ್ಲಿ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ಕಾರಣಕ್ಕೆ ರಾಜೀನಾಮೆ ನೀಡಿದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ, ಹೇಮಂತ್ ಸೊರೆನ್‌ಗೆ ಜಾಮೀನು ದೊರೆತಾಗ, ಚಂಪೈ ಸೊರೆನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಈ ವರ್ಷದ ಜುಲೈನಲ್ಲಿ ಮತ್ತೊಮ್ಮೆ ರಾಜ್ಯದ ಆಡಳಿತವನ್ನು ವಹಿಸಿಕೊಂಡರು.