ನವದೆಹಲಿ: ಅಗ್ನಿವೀರ್ ಯೋಜನೆಗೆ ಪ್ರತಿಪಕ್ಷಗಳ ಜೊತೆಗೆ ಎನ್‌ಡಿಎ ಒಕ್ಕೂಟದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಯೋಜನೆಯಲ್ಲಿ ಪರಿಷ್ಕರಣೆ ಮಾಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.
ಸೇನೆಯಲ್ಲಿ ಅಗ್ನಿವೀರ್ ಸಂಖ್ಯೆ ಹೆಚ್ಚಿಸಲು ವೇತನ ಮತ್ತು ಅರ್ಹತೆಗಳನ್ನು ಬದಲಾವಣೆ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಅದು ಶಿಫಾರಸು ಮಾಡಿದೆ.
ಅಗ್ನಿಪಥ್ ಯೋಜನೆಯಲ್ಲಿ ಪರಿಷ್ಕರಣೆ ಮಾಡಿರುವ ಕೇಂದ್ರ ರಕ್ಷಣಾ ಇಲಾಖೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಪ್ರಸ್ತುತ ಕೇವಲ 25 ಪ್ರತಿಶತದಷ್ಟು ಅಗ್ನಿವೀರರನ್ನು ಅವರ ಆರಂಭಿಕ ಸೇವಾ ಅವಧಿಯ ನಂತರ ಉಳಿಸಿಕೊಳ್ಳಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 50% ಅಗ್ನಿವೀರ್ ಸಂಖ್ಯೆ ಹೆಚ್ಚಿಸಬೇಕಿದ್ದು ಬದಲಾವಣೆ ಅಗತ್ಯ ಎಂದು ಹೇಳಿದೆ.
ಯೋಜನೆಯ ಪ್ರಕಾರ, ಅಗ್ನಿವೀರ್ಸ್ ಎಂದು ಕರೆಯಲ್ಪಡುವ ಸಿಬ್ಬಂದಿಯನ್ನು ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ 25% ಸಿಬ್ಬಂದಿಯನ್ನು ಮಾತ್ರ ಶಾಶ್ವತವಾಗಿ ಮುಂದುವರಿಯಲು ಅನುಮತಿಸಲಾಗಿದೆ.