ಉತ್ತರಪ್ರದೇಶ : ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿ ವಾಪಸ್ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.
ಕುಂಭ ಮೇಳದಲ್ಲಿ ಭಾಗವಹಿಸಿ ವಾಪಸ್ ಆಗುವ ವೇಳೆ ಮಧುಬನಿ ಚತುಷ್ಪಥ ಬೈಪಾಸ್ ನಲ್ಲಿ ವೇಗವಾಗಿ ಬಂದ ಸ್ಕಾರ್ಪಿಯೋ ಎಸ್ ಯುವಿ ವಾಹನ ಮುಂಭಾಗದಲ್ಲಿ ಸ್ಟಂಟ್ ಮಾಡುತ್ತಿದ್ದ ಬೈಕ್ ಅನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಕಾರು ಡಿವೈಡರ್ ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಒಂದು ಟೈರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ಎಸ್ ಯುವಿ ವಾಹನ ಐದು ಪಲ್ಟಿಯಾಗಿದ್ದು, ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ವೇಳೆ ಕಾರಿನಲ್ಲಿದ್ದ ಒಂಬತ್ತು ಜನರ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ನೇಪಾಳ ಮೂಲದವರು ಎನ್ನಲಾಗಿದ್ದು, ಅರ್ಚನಾ ಠಾಕೂರ್, ಇಂದು ದೇವಿ, ಮಂತರ್ಣಿ ದೇವಿ, ಬಾಲ ಕೃಷ್ಣ ಝಾ ಮತ್ತು ಕಾರು ಚಾಲಕ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮನೋಹರ್ ಠಾಕೂರ್, ಸೃಷ್ಟಿ ಠಾಕೂರ್, ಕಮ್ಮಿ ಝಾ ಮತ್ತು ದೇವತರಣ್ ದೇವಿ ಎಂದು ಗುರುತಿಸಲಾಗಿದೆ.