ನವದೆಹಲಿ : ಭಾರತದ ಘನತೆಯ ಬಗ್ಗೆ ಅಪಪ್ರಚಾರ ಮಾಡಲು ಹಲವರು ದೊಡ್ಡ ಷಡ್ಯಂತ್ರ ನಡೆಸುತ್ತಿರುವುದಕ್ಕೆ ತಕ್ಕ ಉತ್ತರವೆಂಬಂತೆ ಇಂದು ಬಿಜೆಪಿಗೆ ಐತಿಹಾಸಿಕ ಗೆಲುವು ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ಇಂಡಿಯಾ ಮಿತ್ರಕೂಟ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಹರಿಯಾಣದಲ್ಲಿ ಬಿಜೆಪಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದ ನಿಮಿತ್ತ, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಪ್ರಧಾನಿ ಶುಭಾಶಯ ಕೋರಿ ಮಾತನಾಡಿದರು. ಕಾಂಗ್ರೆಸ್ನ ಪರಿವಾರವು ದೇಶದ ದೊಡ್ಡ ಭ್ರಷ್ಟ ಪರಿವಾರವಾಗಿದೆ. ಅವರೇ ಭ್ರಷ್ಟಾಚಾರದ ಜನ್ಮದಾತರು ಎಂದು ಕುಟುಕಿದರು.
ದಲಿತರು, ಒಬಿಸಿ ವರ್ಗ ಬಿಜೆಪಿಯ ಜೊತೆಗಿದ್ದಾರೆ ಎಂಬುವುದಕ್ಕೆ ಇಂದಿನ ಚುನಾವಣೆಯ ಫಲಿತಾಂಶವೇ ನಿದರ್ಶನ. ಹೀಗಾಗಿ ಕಾಂಗ್ರೆಸ್ನ ದೇಶ ವಿರೋಧಿ ರಾಜಕೀಯ ನಡೆಯುವುದಿಲ್ಲ. ಭಾರತದ ವಿರುದ್ಧ ಹಲವು ಷಡ್ಯಂತ್ರ ನಡೆದಿವೆ. ಭಾರತದ ಪ್ರಜಾಪ್ರಭುತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದುರ್ಬಲಗೊಳಿಸುವ ಪಿತೂರಿ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಭಾಗಿಯಾಗಿವೆ ಎಂದು ಪ್ರಧಾನಿ ಗಂಭೀರ ಆರೋಪ ಮಾಡಿದರು.