ಪಾಟ್ನಾ: ಬಿಹಾರದಲ್ಲಿ ಸೇತುವೆ ಕುಸಿದು ಬೀಳುವ ಘಟನೆ ಮುಂದುವರಿದಿದ್ದು, ಇಂದು (ಜುಲೈ 04) ಸರನ್ ಜಿಲ್ಲೆಯಲ್ಲಿನ ಸೇತುವೆಯೊಂದು ಕುಸಿದು ಬಿದ್ದಿದ್ದು, ಕಳೆದ 24 ಗಂಟೆಗಳಲ್ಲಿ ಸರನ್ ಜಿಲ್ಲೆಯಲ್ಲಿ ಮೂರು ಸೇತುವೆ ಕುಸಿದು ಬಿದ್ದ ಘಟನೆ ನಡೆದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಾನ್ ಸಮೀರ್ ತಿಳಿಸಿದ್ದಾರೆ.
ಕಳೆದ 15 ದಿನಗಳಲ್ಲಿ ಬಿಹಾರದಲ್ಲಿ ಹತ್ತು ಸೇತುವೆ ಕುಸಿದು ಬಿದ್ದಿದೆ. ಇಂದು ಕುಸಿದು ಬಿದ್ದ ಸೇತುವೆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಗಂಡಕಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ 15 ವರ್ಷಗಳಷ್ಟು ಹಳೆಯ ಸೇತುವೆ ಕುಸಿದು ಬಿದ್ದಿದ್ದು, ಈ ಸೇತುವೆ ಸರನ್ ಹಾಗೂ ನೆರೆಯ ಸಿವಾನ್ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ತುರ್ತು ನಿಗಾ ವಹಿಸಬೇಕಾದ ಸೇತುವೆಗಳ ಕುರಿತು ವರದಿ ನೀಡುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.