Ad

ಅಯೋಧ್ಯೆಯ ರಾಮ ಪಥ ಕಾಮಗಾರಿ ನಿರ್ಲಕ್ಷ್ಯ: 6 ಅಧಿಕಾರಿಗಳು ಅಮಾನತು

ಭಾರೀ ಮಳೆಯಿಂದಾಗಿ ಅಯೋಧ್ಯೆಯ 14 ಕಿ.ಮೀ. ಉದ್ದದ ರಾಮ ಪಥ ಹಾನಿಗೊಳಗಾಗಿದೆ.

ಅಯೋಧ್ಯೆ: ಭಾರೀ ಮಳೆಯಿಂದಾಗಿ ಅಯೋಧ್ಯೆಯ 14 ಕಿ.ಮೀ. ಉದ್ದದ ರಾಮ ಪಥ ಹಾನಿಗೊಳಗಾಗಿದೆ. ಅಲ್ಲದೆ ಒಳಚರಂಡಿ ನಿರ್ಮಾಣ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಲೋಕೋಪಯೋಗಿ ಇಲಾಖೆ ಮತ್ತು ಉತ್ತರ ಪ್ರದೇಶ ಜಲ ನಿಗಮದ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

Ad
300x250 2

ರಾಮಪಥದ ಉದ್ದಕ್ಕೂ ಇರುವ ಸುಮಾರು 15 ಉಪ ಮಾರ್ಗಗಳು ಮತ್ತು ಬೀದಿಗಳು ಮಳೆಯ ನಂತರ ತೀವ್ರವಾಗಿ ಜಲಾವೃತಗೊಂಡಿದ್ದವು. ಇದಲ್ಲದೆ ಸಮೀಪದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಂಕಷ್ಟ ಎದುರಾಗಿತ್ತು.

ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಎಂದು ಉಲ್ಲೇಖಿಸಿ ಅಹಮದಾಬಾದ್ ಮೂಲದ ಗುತ್ತಿಗೆದಾರ ಸಂಸ್ಥೆ ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಟ್‌ಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಧ್ರುವ್ ಅಗರ್ವಾಲ್ ಮತ್ತು ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್ ಅವರನ್ನು ಅಮಾನತುಗೊಳಿಸಿ ವಿಶೇಷ ಕಾರ್ಯದರ್ಶಿ ವಿನೋದ್ ಕುಮಾರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ವಿ.ಕೆ.ಶ್ರೀವಾಸ್ತವ್ ಅವರು ಕಿರಿಯ ಎಂಜಿನಿಯರ್ ಪ್ರಭಾತ್ ಕುಮಾರ್ ಪಾಂಡೆ ಅವರನ್ನು ಅಮಾನತುಗೊಳಿಸಿದ್ದಾರೆ.

ಉತ್ತರ ಪ್ರದೇಶ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ಅವರು ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್ ಕುಮಾರ್ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರ ಕುಮಾರ್ ಯಾದವ್ ಮತ್ತು ಕಿರಿಯ ಎಂಜಿನಿಯರ್ ಮೊಹಮ್ಮದ್ ಶಾಹಿದ್ ಅವರನ್ನು ಅಮಾನತು ಮಾಡಿದ್ದಾರೆ.

“ರಾಮ ಪಥವನ್ನು ನಿರ್ಮಿಸಿದ ಕೆಲವೇ ದಿನಗಳಲ್ಲಿ ಅದರ ಮೇಲಿನ ಪದರಕ್ಕೆ ಹಾನಿಯಾಗಿದೆ. ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಕೈಗೊಂಡಿದ್ದ ಈ ಕಾಮಗಾರಿಯಲ್ಲಿನ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರ ಮುಂದೆ ರಾಜ್ಯ ಸರ್ಕಾರದ ಘನತೆಗೆ ಹಾನಿಯಾಗಿದ್ದು, ಈ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗಿದೆ” ಎಂದು ಲೋಕೋಪಯೋಗಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

 

 

 

Ad
Ad
Nk Channel Final 21 09 2023
Ad