ಅಮರಾವತಿ: ತರಾತುರಿಯಲ್ಲಿ ಮಾಡೆಲ್ ಒಬ್ಬರನ್ನು ಬಂಧಿಸಿ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.
ಈ ಕುರಿತು ಶನಿವಾರ ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಂಡಿರುವುದು ತಿಳಿದು ಬಂದಿದೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ. ಸೀತಾರಾಮ ಆಂಜನೆಯಲು, ಕ್ರಾಂತಿ ರಾಣಾ ಟಾಟಾ ಹಾಗೂ ಐಪಿಎಸ್ ಅಧಿಕಾರಿ, ವಿಜಯವಾಡದ ಮಾಜಿ ಡಿಸಿಪಿ ವಿಶಾಲ್ ಗುನ್ನಿ ಅಮಾನತುಗೊಂಡ ಅಧಿಕಾರಿಗಳು. ನಟಿ ಹಾಗೂ ಮಾಡೆಲ್ ಕಾದಂಬರಿ ಜೆಟ್ವಾನಿ ಎನ್ನುವರು ತಮಗೆ ವಂಚಿಸಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಫೆಬ್ರುವರಿ 2 ರಂದು ಆಂಧ್ರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಭಾಗವಾಗಿ ಪಿ. ಸೀತಾರಾಮ ಆಂಜನೆಯಲು ಅವರು ಕಾದಂಬರಿ ಅವರನ್ನು ಬಂಧಿಸಲು ತಮ್ಮ ಅಧೀನದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆದರೆ, ಕಾದಂಬರಿ ತಮ್ಮ ಬಂಧನ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಕುರಿತು ಇಲಾಖಾ ತನಿಖೆ ನಡೆಸಿದಾಗ ಸೀತಾರಾಮ ಆಂಜನೆಯಲು, ಕಾಂತಿ ರಾಣಾ ಟಾಟಾ ಹಾಗೂವಿಶಾಲ್ ಗುನ್ನಿ ತಪ್ಪಿತಸ್ಥರೆಂದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.