ಉತ್ತರ ಪ್ರದೇಶ: ರಾಷ್ಟ್ರೀಯ ಹೆದ್ದಾರಿ 93ರಲ್ಲಿ ರಸ್ತೆ ಮಾರ್ಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವ್ಯಾನ್ ಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವ್ಯಾನ್ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 17ಮಂದಿ ಮೃತಪಟ್ಟಿದ್ದಾರೆ.
ಹತ್ರಾಸ್ನಲ್ಲಿ 11 ಮಂದಿ ಗಾಯಾಳುಗಳು ಮತ್ತು ಅಲಿಗಢದಲ್ಲಿ 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹತ್ರಾಸ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಕುಮಾರ್ ಇಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಿನ್ನೆ ಕನಿಷ್ಠ 15 ಜನರು ಮೃತಪಟ್ಟಿದ್ದರು.
ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕನ್ವರ್ಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಹತ್ರಾಸ್ನಿಂದ ಆಗ್ರಾಕ್ಕೆ ತೆರಳುತ್ತಿದ್ದರು.
ಮೃತರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.