ನವದೆಹಲಿ: ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಯಾವುದೇ ಶುಲ್ಕ ಇಲ್ಲದೇ ಅಪ್ಡೇಟ್ ಮಾಡುವ ಅವಕಾಶವನ್ನು ವಿಸ್ತರಿಸಲಾಗಿದೆ. ಯುಐಡಿಎಐನಿಂದ ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ಪ್ರಕಟವಾಗಿದೆ.
ಆಧಾರ್ ನಂಬರ್ ಹೊಂದಿರುವ ಕೋಟ್ಯಂತರ ಜನರಿಗೆ ಅನುಕೂಲವಾಗಲೆಂದು ಆನ್ಲೈನ್ನಲ್ಲಿ ಉಚಿತವಾಗಿ ಡಾಕ್ಯುಮೆಂಟ್ ಅಪ್ಲೋಡ್ ಸೌಲಭ್ಯವನ್ನು ಡಿಸೆಂಬರ್ 14ರವರೆಗೂ ವಿಸ್ತರಿಸಲಾಗಿದೆ. ಈ ಉಚಿತ ಸರ್ವಿಸ್ ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯ ಇರುತ್ತದೆ. ಜನರು ಆಧಾರ್ನಲ್ಲಿ ತಮ್ಮ ದಾಖಲೆಗಳನ್ನು ಅಪ್ಡೇಟೆಡ್ ಆಗಿ ಇಟ್ಟುಕೊಳ್ಳಲು ಯುಐಡಿಎಐ ಉತ್ತೇಜಿಸುತ್ತದೆ ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಆಧಾರ್ನಲ್ಲಿ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು. ಅದಕ್ಕೆ, ನಿಮ್ಮ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ನ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಯುಐಡಿಎಐನ ಮೈ ಆಧಾರ್ ಪೋರ್ಟಲ್ಗೆ ಹೋಗಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ನ ಡೆಮಾಗ್ರಾಫಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.
ಡಿಸೆಂಬರ್ 14ರ ಬಳಿಕವೂ ನೀವು ಆನ್ಲೈನ್ನಲ್ಲಿ ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡಬಹುದಾದರೂ ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಆಧಾರ್ ಸೆಂಟರ್ಗೆ ಹೋಗಿಯೂ ನೀವು ಅಪ್ಡೇಟ್ ಮಾಡಿಸಬಹುದು. ಮನೆಯಲ್ಲೆ ಕೂತು ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಡಿಸೆಂಬರ್ 14ರವರೆಗೂ ಇರುವ ಅವಕಾಶವನ್ನು ಬಳಸಿಕೊಳ್ಳಬಹುದು.
ಹತ್ತು ವರ್ಷಗಳಿಂದ ಯಾರಾದರೂ ತಮ್ಮ ಆಧಾರ್ ಅನ್ನು ಅಪ್ಡೇಟ್ ಮಾಡಿಸಿಲ್ಲದೇ ಇದ್ದರೆ ಅಂಥವರು ಇತ್ತೀಚಿನ ದಾಖಲೆಗಳಿದ್ದರೆ ಅದನ್ನು ಅಪ್ಲೋಡ್ ಮಾಡಬೇಕು ಎಂದು ಯುಐಡಿಎಐ ತಿಳಿಸಿದೆ. ಡೆಮಾಗ್ರಾಫಿಕ್ ಮಾಹಿತಿ ಹೆಚ್ಚು ನಿಖರವಾಗಿರಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಆಧಾರ್ ಸಂಬಂಧಿತ ಸೇವೆಯನ್ನು ನಿಖರಗೊಳಿಸಲು ಮತ್ತು ಅಥೆಂಟಿಕೇಶನ್ ಕಾರ್ಯವನ್ನು ಹೆಚ್ಚು ನಿಖರಗೊಳಿಸಲು ಸಾಧ್ಯವಾಗುತ್ತದೆ.