ನವದೆಹಲಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಕಾರು ಚಲಾಯಿಸಿ ಸುಮಾರು ಹತ್ತು ಮೀಟರ್ ದೂರ ಎಳೆದೊಯ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಇಲ್ಲಿನ ಕನ್ನಾಟ್ ಎಂಬ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಕಾರು ಹರಿದಿದೆ. ಬಳಿಕ ಚಕ್ರದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಸುಮಾರು 10 ಮೀಟರ್‌ವರೆಗೆ ಎಳೆದೊಯ್ದಿದ್ದಾನೆ, ಆದಾಗ್ಯೂ ಕಾರು ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಅಪಘಾತಗೊಂಡ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೇಖ್‌ರಾಜ್ (45) ಮೃತಪಟ್ಟ ವ್ಯಕ್ತಿ. ಘಟನೆಯ ಬಳಿಕ ಈತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರು ಚಾಲಕ ಶಿವಂ ದುಬೆ(28)ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಚಾಲಕನನ್ನ ಪತ್ತೆಹಚ್ಚಿ, ನಂತರ ಬಂಧಿಸಿದ್ದಾರೆ. ಈತ ಮಧ್ಯಪ್ರದೇಶ ಮೂಲದವನಾಗಿದ್ದು ದೆಹಲಿಯಲ್ಲಿ ಮಹಿಪಾಲ್ ಪುರದ ಸ್ನೇಹಿತನಿಂದ ಕಾರು ಪಡೆದಿದ್ದ. ಕನ್ನಾಟ್ ಪ್ರದೇಶದಲ್ಲಿ ವ್ಯಕಿಯೋರ್ವರನ್ನು ಭೇಟಿಯಾಗುವುದಕ್ಕೆ ಹೊರಟಿದ್ದ. ಆ ಸಮಯದಲ್ಲಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ನಡೆದ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.