ನವದೆಹಲಿ: ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು 10 ಮೀಟರ್ ವರೆಗೂ ಎಳೆದೊಯ್ದ ಪರಿಣಾಮ ಕರ್ತವ್ಯನಿರತ ಪೊಲೀಸ್ ಪೇದೆ ದಾರುಣ ಸಾವಿಗೀಡಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಪೊಲೀಸ್ ಸಂದೀಪ್ ಮೃತ ದುರ್ದೈವಿ. ಈ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದರ ಹಿಂದೆ ಏನಿದೆ ಎಂದು ತನಿಖೆ ಮಾಡಲು ಕರ್ತವ್ಯದಲ್ಲಿದ್ದರು. ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ವ್ಯಾಗನಾರ್ ಕಾರು ಅವರನ್ನು ಹಿಂದಿಕ್ಕಲು ಪ್ರಯತ್ನಿಸಿತು. ನಿಧಾನವಾಗಿ ಹೋಗುವಂತೆ ಕಾರು ಚಾಲಕನಿಗೆ ಸಂದೀಪ್ ತಿಳಿಸಿದ್ದಾರೆ.
ಏಕಾಏಕಿ ಕಾರಿನ ವೇಗ ಹೆಚ್ಚಿಸಿ ಹಿಂದಿನಿಂದ ಸಂದೀಪ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಸಂದೀಪ್‌ರನ್ನು ಬೈಕ್ ಸಮೇತ ಸುಮಾರು 10 ಮೀಟರ್ ವರೆಗೂ ಕಾರು ಎಳೆದೊಯ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್ ಸಂದೀಪ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ದೃಶ್ಯ ಸೆರೆಯಾಗಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ಒಬ್ಬ ಅಕ್ರಮ ಮದ್ಯದ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂದು ಕೆಲವು ಮೂಲಗಳು ಹೇಳಿವೆ. ರಾಷ್ಟ್ರ ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ಈ ಕೇಸ್‌ಗಳಲ್ಲಿ ಅಪಾರ ಸಾವು-ನೋವುಗಳಾಗಿವೆ.