ಕೋಲ್ಕತ್ತಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮುಂದುವರೆದಿರುವ ಹಿನ್ನೆಲೆ ಅಲ್ಲಿನ ಸುಮಾರು 600 ಜನ ಅಕ್ರಮವಾಗಿ ಪಶ್ಚಿಮ ಬಂಗಾಳದ ಗಡಿಪ್ರದೇಶದೊಳಗೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ್ದು, ಅವರನ್ನು ತಡೆಯುವಲ್ಲಿ ಗಡಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಶೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಲ್ಲಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಗಡಿ ಪ್ರದೇಶಗಳಲ್ಲಿ ಬಿಎಸ್‌ಎಫ್ ಹೈ ಅಲರ್ಟ್ ಆಗಿದೆ. ಬಾಂಗ್ಲಾದಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಕ್ಷಣ ಕ್ಷಣಕ್ಕೂ ಪ್ರಾಣಭೀತಿ ಎದುರಿಸುತ್ತಿರುವುದಾಗಿ ಹೇಳಿಕೊಂಡು ಅನೇಕ ಜನರು ಭಾರತದ ಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುವಂತೆ ಬಿಎಸ್‌ಎಫ್ ಸಿಬ್ಬಂದಿ ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ದಕ್ಷಿಣ್ ಬೆರುಬರಿ ಗ್ರಾಮದಲ್ಲಿ ಈ ಗುಂಪು ಭಾರತದ ಗಡಿ ದಾಟಲು ಪ್ರಯತ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ನಮ್ಮಲ್ಲಿ ಮನವಿ ಮಾಡಿದರು ಮತ್ತು ದೇಶಕ್ಕೆ ಬಿಡುವಂತೆ ಕೇಳಿಕೊಂಡರು, ಅವರು ದಾಳಿಗೆ ಹೆದರುತ್ತಿರುವುದಾಗಿ ಮತ್ತು ತಮ್ಮ ಜೀವದ ಭಯವಿದೆ ಎಂದು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ಮಾದರಿಯಲ್ಲಿ ಅವರಿಗೆ ಗಡಿಯೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅರ್ಥಮಾಡಿಸಲಾಗಿದೆ ಎಂದು ಹೇಳಿದರು.
ಮೀಸಲಾತಿ ವಿರೋಧಿಸಿ ನಿರಂತರ ಪ್ರತಿಭಟನೆ, ಗಲಭೆಗಳ ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಪರಾರಿಯಾಗಿರುವ ನಂತರ, ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು, ಮೊಹಮ್ಮದ್ ಯೂನಸ್ ಅವರು ಇಂದು ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್ ಉಜ್ ಜಮಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗುರುವಾರ ರಾತ್ರಿ 8 ಗಂಟೆಗೆ ಮೊಹಮ್ಮದ್ ಯೂನಸ್ ಅವರು ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.