ಮುಂಬಯಿ: ಕಾರು ಢಿಕ್ಕಿಯಾಗಿ 4 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ. ಮುಂಬೈನ ವಡಾಲಾ ಅಂಬೇಡ್ಕರ್ ಕಾಲೇಜು ಬಳಿ ಈ ಘಟನೆ ನಡೆದಿದೆ ಎಂದು ಭಾನುವಾರ (ಡಿ.22 ರಂದು) ಪೊಲೀಸರು ತಿಳಿಸಿದ್ದಾರೆ.
ಆಯುಷ್ ಲಕ್ಷ್ಮಣ್ ಕಿನ್ವಾಡೆ (4) ಮೃತ ಬಾಲಕ. ಶನಿವಾರ ಸಂಜೆ 5 ಗಂಟೆಯ ವೇಳೆ ಆಯುಷ್ ರಸ್ತೆ ಬದಿಯಲ್ಲಿ ಆಡುತ್ತಿದ್ದಾಗ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಬಾಲಕನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದೆ.
ಅಜಾಗರೂಕತೆಯಿಂದ ಚಾಲನೆ ಮಾಡಿದ್ದಕ್ಕಾಗಿ ಆರೋಪಿ ಭೂಷಣ್ ಸಂದೀಪ್ ಗೋಲೆ ಎಂಬಾತನನ್ನು ಬಂಧಿಸಲಾಗಿದೆ. ಈತ ವಿಲೆ ಪಾರ್ಲೆ ನಿವಾಸಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.
ಅಪಘಾತದ ಸಮಯದಲ್ಲಿ ಚಾಲಕ ಮದ್ಯದ ಅಮಲಿನಲ್ಲಿದ್ದನೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ಮೃತ ಬಾಲಕ ಅವರ ಕುಟುಂಬದೊಂದಿಗೆ ಫುಟ್ ಪಾತ್ ಮಾರ್ಗದಲ್ಲಿ ವಾಸಿಸುತ್ತಿದ್ದ. ಆತನ ತಂದೆ ಕೂಲಿ ಕೆಲಸ ಮಾಡುತ್ತಿದ್ದರು.