ನವದೆಹಲಿ: ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆ ದಿನ 300 ಕೆಜಿ ತಿರುಪತಿ ಲಡ್ಡು ಪ್ರಸಾದ ಬಂದಿತ್ತು ಎಂದು ಅಯೋಧ್ಯೆಯ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
ರಾಮಮಂದಿರದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಜನವರಿಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ತಿರುಪತಿ ದೇವಸ್ಥಾನದಿಂದ 300 ಕೆಜಿ ಪ್ರಸಾದವನ್ನು ಭಕ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯ ಅರ್ಚಕರು ಖಚಿತಪಡಿಸಿದ್ದಾರೆ.
ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಸುದ್ದಿ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ‘ಪ್ರಸಾದ’ ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸುತ್ತಿದ್ದ ಬಗ್ಗೆ ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರು ಬೇಸರ ಹೊರಹಾಕಿದ್ದಾರೆ. ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ್ದರೆ ಅದು ಅಕ್ಷಮ್ಯ. ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ.