ಗುವಾಹಟಿ: ನಿಷೇಧಿತ ಉಲ್ಫಾ (ಐ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಕಳೆದ ಸ್ವಾತಂತ್ರ್ಯ ದಿನಾಚರಣೆಯ ದಿನ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿರುವ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಹಾಗೂ ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15 ಜನರನ್ನು ಬಂಧಿಸಲಾಗಿದೆ. ಇವರ ಬಗ್ಗೆ ಸುಳಿವು ನೀಡಿದವರಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಅಸ್ಸಾಂ ಪೊಲೀಸ್ ಇಲಾಖೆ ಘೋಷಣೆ ಮಾಡಿತ್ತು.
ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಪ್ರದೇಶಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಬಳಸಿಕೊಂಡು ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಆದರೆ ಗುಪ್ತಚರ ಮಾಹಿತಿ ಪಡೆದು ಸ್ಥಳೀಯ ಪೊಲೀಸರು ಈ ಸಂಚನ್ನು ವಿಫಲಗೊಳಿಸಿದ್ದರು.
ಬಂಧಿತ ಆರೋಪಿಗಳು ನಿಷೇಧಿತ ಉಲ್ಫಾ (ಐ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ದಿಬ್ರುಗಡ್, ಲಖಿಂಪುರ, ಜೋರ್ಹಾತ್, ಗುವಾಹಟಿ, ತಿನ್ಸುಕಿಯಾ, ಸಾದಿಯಾ, ನಾಗಾಂವ್, ನಲ್ಬರಿ ಪ್ರದೇಶಗಳಿಂದ 15 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಗೋಸ್ವಾಮಿ ಹೇಳಿದ್ದಾರೆ