ನೋಡಲು ಆಕರ್ಷಕವಾಗಿವೆ ಎಂಬ ಕಾರಣಕ್ಕೆ ವಿವಿಧ ಲೋಹಗಳಿಂದ ತಯಾರಿಸಲ್ಪಟ್ಟ ಆಭರಣಗಳನ್ನು ಧರಿಸುವ ಮುನ್ನ ಅದು ನಮ್ಮ ತ್ವಚೆಗೆ ಹೊಂದಿಕೊಳ್ಳುತ್ತದೆಯಾ ಎಂಬುದನ್ನು ಮಹಿಳೆಯರು ಗಮನಿಸುವುದು ಬಹುಮುಖ್ಯವಾಗಿದೆ. ಏಕೆಂದರೆ ಕೆಲವರ ದೇಹದ ತ್ವಚೆಗೆ ಕೆಲವೊಂದು ಲೋಹಗಳು ಹೊಂದಿಕೊಳ್ಳದೆ ಇರುವುದರಿಂದ ಕಜ್ಜಿ, ಕೆರೆತ, ತ್ವಚ್ಚೆ ಕಪ್ಪಾಗುವಿಕೆ ಹೀಗೆ ಹಲವು ಸಮಸ್ಯೆಗಳು ಕಾಡಬಹುದು.
ಕೆಲವೊಮ್ಮೆ ತ್ವಚೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದರ ಮೂಲ ಗೊತ್ತಿಲ್ಲದೆ ಒದ್ದಾಡಲೂ ಬಹುದು. ಹೀಗಾಗಿ ಯಾವುದೇ ಆಭರಣಗಳನ್ನು ಧರಿಸುವ ಮುನ್ನ ಯುವತಿಯರು, ಮಹಿಳೆಯರು ಅದು ತಮ್ಮ ದೇಹದ ತ್ವಚೆಗೆ ಹೊಂದಿಕೊಳ್ಳುತ್ತದೆಯಾ ಎಂಬುದನ್ನು ಗಮನಿಸಬೇಕಾಗುತ್ತದೆ. ಬಹಳಷ್ಟು ಜನರಿಗೆ ಕೆಲವೊಂದು ಲೋಹಗಳು ಹೊಂದುವುದಿಲ್ಲ. ಹೀಗಾಗಿ ಅವರು ಅದನ್ನು ಧರಿಸಿದಾಗಲೆಲ್ಲ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹೀಗಾಗಿ ತಮ್ಮ ತ್ವಚೆಗೆ ಹೊಂದಿಕೆ ಆಗುವುದಿಲ್ಲ ಎಂಬುದು ಗಮನಕ್ಕೆ ಬಂದರೆ ಅಂತಹ ಲೋಹದ ಆಭರಣಗಳನ್ನು ಧರಿಸುವ ಪ್ರಯತ್ನ ಮಾಡಬಾರದು.
ಸಾಮಾನ್ಯವಾಗಿ ಮಹಿಳೆಯರು ಕತ್ತು, ಕಿವಿ ಬೆರಳು, ಮೂಗು ಮತ್ತು ಕೈಗಳಿಗೆ ಆಭರಣಗಳನ್ನು ಧರಿಸುವುದರಿಂದಾಗಿ ಆ ಜಾಗಗಳಲ್ಲಿ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಆಭರಣಗಳಿಂದ ಕಾಣಿಸಿಕೊಂಡ ಸಮಸ್ಯೆ ಎಂಬುದು ಗೊತ್ತಾಗುವುದಿಲ್ಲ ಹಾಗಾಗಿ ಅವರು ಆಭರಣ ಹಾಕಿಕೊಂಡೇ ಬೇರೆ ಬೇರೆ ರೀತಿಯ ಚಿಕಿತ್ಸೆಗಳನ್ನು ಪಡೆಯುತ್ತಾ ಹೋಗುತ್ತಾರೆ. ಆದರೆ ಕೆಲವೊಮ್ಮೆ ಸಮಸ್ಯೆಗೆ ಮೂಲ ನಮ್ಮ ಆಭರಣಗಳು ಆಗಿರುತ್ತದೆ ಎಂಬುದನ್ನು ಮರೆತು ಬಿಡುತ್ತೇವೆ.
ವೈದ್ಯಲೋಕದಲ್ಲಿ ಆಭರಣಗಳ ಅಲರ್ಜಿಯನ್ನು ಡರ್ಮಟಿಟಿಸ್ ಎಂದು ಕರೆಯಲಾಗುತ್ತದೆ. ಕೆಲವೊಂದು ವಸ್ತುವು ನಮ್ಮ ತ್ವಚೆಗೆ ಹೊಂದಾಣಿಕೆಯಾಗುವುದಿಲ್ಲ. ಆಗ ಇಂತಹ ಅಲರ್ಜಿಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಚಿನ್ನ ಸೇರಿದಂತೆ ದುಬಾರಿ ಲೋಹದ ಆಭರಣಗಳ ತಯಾರಿಕೆ ವೇಳೆ ಬಳಸಲಾಗುವ ನಿಕ್ಕಲ್ ಈ ಅಲರ್ಜಿಗೆ ಕಾರಣ ಎಂದು ಹೇಳಲಾಗುತ್ತದೆ.
ಚಿನ್ನ ಮತ್ತು ಬೆಳ್ಳಿ ಆಭರಣಗಳಲ್ಲಿ ನಿಕ್ಕಲ್ ಬಳಕೆಯಾಗುವುದರಿಂದ ಅದು ತ್ವಚೆಗೆ ತೊಂದರೆಕೊಡುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗಿದಾಗ ಆಭರಣಗಳು ಮತ್ತು ಅದರಲ್ಲಿರುವ ನಿಕ್ಕಲ್ ಮುಂತಾದ ಲೋಹಗಳಿಗೆ ತ್ವಚೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುತ್ತದೆಯಂತೆ ಆಗ ಆಭರಣ ಅಲರ್ಜಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.
ಕೆಲವೊಮ್ಮೆ ಆಭರಣದ ಕೆಲ ಭಾಗಗಳಲ್ಲಿರುವ ಲೋಹಗಳು ಮತ್ತು ಅವುಗಳ ಘರ್ಷಣೆ, ಲೋಹದ ಕಣಗಳು, ಸೋಪ್, ಧೂಳು ಮುಂತಾದವು ಕೂಡ ತ್ವಚೆಗೆ ಸರಿಹೊಂದದೆ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಇದರಿಂದ ತುರಿಕೆ ಮತ್ತು ಸಣ್ಣಗಿನ ಕಜ್ಜಿಗಳು ಕಂಡು ಬಂದು ಅಸಹ್ಯ ಹುಟ್ಟಿಸಲೂ ಬಹುದು. ಇದು ಎಲ್ಲರಲ್ಲಿ ಕಾಣಿಸುವುದಿಲ್ಲ ಬದಲಿಗೆ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಆಭರಣ ಧರಿಸುವ ಕಿವಿ, ಕುತ್ತಿಗೆ, ಬೆರಳುಗಳಲ್ಲಿ ಆಭರಣ ಧರಿಸಿದ ಸಂದರ್ಭ ತುರಿಕೆ, ಕಜ್ಜಿಗಳು ಕಾಣಿಸಿದರೆ ಅದನ್ನು ಆಭರಣ ಅಲರ್ಜಿ ಎನ್ನಬಹುದಾದರೂ ಕೆಲವೊಮ್ಮೆ ಸ್ವಚ್ಛತೆಯ ಕೊರತೆಯಿಂದಲೂ ಈ ತೊಂದರೆ ಕಾಣಿಸಬಹುದು. ಆಭರಣ ಧರಿಸಿದ ಭಾಗಗಳು ಕೆಂಪಾಗುತ್ತವೆ, ಚಿಕ್ಕದಾದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ, ತ್ವಚೆ ದಪ್ಪವಾದಂತೆ ಭಾಸವಾಗುವುದು ಹೀಗೆ ಕೆಲವೊಂದು ಲಕ್ಷಣಗಳು ಕಾಣಿಸಬಹುದು. ಕೆಲವರಿಗೆ ಚಿನ್ನಾಭರಣ ಧರಿಸಿದರೆ ಯಾವುದೇ ಸಮಸ್ಯೆ ಕಾಣಿಸದೆ ಇತರೆ ಫ್ಯಾನ್ಸಿ ಆಭರಣಗಳನ್ನು ಧರಿಸಿದಾಗ ಸಮಸ್ಯೆಗಳು ಕಾಣಿಸಬಹುದು.
ಅದು ಏನೇ ಇರಲಿ ಇಂತಹ ಸಮಸ್ಯೆಗಳು ಕಂಡು ಬಂದರೆ ಚರ್ಮ ರೋಗದ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇತ್ತೀಚೆಗಿನ ದಿನಗಳಲ್ಲಿ ಚಿನ್ನ, ಬೆಳ್ಳಿ ಬಳಕೆಗಿಂತ ಇತರೆ ಲೋಹಗಳ ಬಳಕೆ ಜಾಸ್ತಿಯಾಗಿರುವುದರಿಂದ ಕೆಲವು ಲೋಹಗಳು ತ್ವಚೆಗೆ ಸರಿ ಹೊಂದದೆ ಸಮಸ್ಯೆಗಳನ್ನು ತರಬಹುದು. ಆದ್ದರಿಂದ ನಾವು ಯಾವ ಲೋಹ ಧರಿಸುತ್ತೇವೋ ಅದು ತ್ವಚೆಗೆ ಹೊಂದಿಕೆಯಾದರೆ ಮಾತ್ರ ಮುಂದುವರೆಸುವುದು ಒಳ್ಳೆಯದು.