ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಕೆಂಬಣ್ಣದ ಹರಿವೆಯಲ್ಲಿ ಸಾಮಾನ್ಯ ಹರಿವೆಗಿಂತ ಹೆಚ್ಚು ಪೋಷಕಾಂಶಗಳಿವೆ. ಇದು ಆರೋಗ್ಯದ ವಿಚಾರದಲ್ಲಿ ಅಪ್ಪಟ ಚಿನ್ನ. ಇದರಲ್ಲಿ ವಿಟಮಿನ್ ಇ, ಸಿ ಮತ್ತು ಕೆ ಹೇರಳವಾಗಿದ್ದು, ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂನಂತಹ ಅತ್ಯಗತ್ಯ ಖನಿಜಾಂಶಗಳೂ ಹೇರಳವಾಗಿವೆ. ಆಂಟಿ ಆಕ್ಸಿಡೆಂಟ್‌ಗಳಿಂದ ಶ್ರೀಮಂತವಾಗಿದ್ದು, ಇದು ಒಟ್ಟು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಯಾರಾದರೂ, ತೂಕ ಇಳಿಸಬೇಕೆಂಬ ಯೋಚನೆಯಲ್ಲಿದ್ದರೆ ಅಂಥವರಿಗೆ ಇದು ಅತ್ಯಂತ ಉತ್ತಮವಾದ ಆಹಾರ. ಯಾಕೆಂದರೆ, ಇದರಲ್ಲಿ ಕಡಿಮೆ ಕ್ಯಾಲರಿಯಿದ್ದು, ನಾರಿನಂಶವೂ ಹೇರಳವಾಗಿದೆ. ಜೊತೆಗೆ ಬೇಕಾದ ಎಲ್ಲ ಪೋಷಕಾಂಶಗಳೂ ಭರಪೂರ ಇವೆ. ಫಿಟ್‌ನೆಸ್ ಕಾಪಾಡಿಕೊಳ್ಳಲು ಬೇಕಾದ ಎಲ್ಲವೂ ಇದರಲ್ಲಿದೆ. ಹೆಚ್ಚು ಹೊತ್ತು ಹೊಟ್ಟೆ ಫುಲ್ ಆದ ಅನುಭವ ನೀಡುವ ಕಾರಣ ಬೇರೆ ಆಗಾಗ ಏನಾದರೂ ತಿನ್ನಲು ಅನವಶ್ಯಕ ಪ್ರಚೋದನೆಯಾಗದು.
ತೂಕದ ವಿಚಾರವನ್ನು ಹೊರತುಪಡಿಸಿದರೆ, ಮಲಬದ್ಧತೆಯ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು. ಜೀರ್ಣಕ್ರಿಯೆಗೆ ಇದು ಅತ್ಯಂತ ಒಳ್ಳೆಯದು. ಇದರಲ್ಲಿರುವ ನಾರಿನಂಶ, ಮಲಬದ್ಧತೆಯ ಸಮಸ್ಯೆಯನ್ನು ದೂರ ಓಡಿಸುತ್ತದೆ. ಇದನ್ನು ಸೇವಿಸಿದರೆ, ಬೆಳಗ್ಗೆ ಎದ್ದ ಕೂಡಲೇ ಖಂಡುತವಾಗಿಯೂ ಆರಾಮವಾಗಿ ಸುಖವಾಗಿ ಶೌಚ ಮುಗಿಸಿಕೊಳ್ಳುವಿರಿ. ಹೊಟ್ಟೆ ಹಗುರವಾಗಿ, ದೇಹ ಚುರುಕಾಗಿ ಇರಲು ಇದು ಅತ್ಯಂತ ಸೂಕ್ತವಾದ ಆಹಾರ.
ಯಾವ ಔಷಧಿಗಳ ಸಹಾಯವೂ ಇಲ್ಲದೆ ಮಲಬದ್ಧತೆಯ ವಿರುದ್ಧ ಜಯ ಸಾಧಿಸಬಹುದು. ಈ ಕೆಂಪು ಹರಿವೆ ಸೊಪ್ಪಿನ ಇನ್ನೊಂದು ಪ್ರಮುಖ ಲಾಭವೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಕೆ ಇರುವುದರಿಂದ, ಋತುಮಾನಕ್ಕೆ ಅನುಸಾರವಾಗಿ ಬರುವ ಆರೋಗ್ಯ ಸಮಸ್ಯೆಗಳನ್ನು ದೂರ ಓಡಿಸುತ್ತದೆ. ಅವುಗಳು ಬರದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಭದ್ರ ಕೋಟೆಯನ್ನು ಬೆಳೆಸುತ್ತದೆ.
ಎಲುಬು ಗಟ್ಟಿಯಾಗಬೇಕು ಎಂದರೆ ನೀವು ಖಂಡಿತವಾಗಿಯೂ ಈ ಕೆಂಪು ಹರಿವೆ ಸೊಪ್ಪನ್ನು ಕಂಡಾಗಲೆಲ್ಲ ಖರೀದಿಸಿ ತಂದೇ ತರುವಿರಿ. ಸೊಪ್ಪನ್ನು ಶುಚಿಗೊಳಿಸಿ ಅಡುಗೆ ಮಾಡುವ ಕೆಲಸ ಸ್ವಲ್ಪ ತ್ರಾಸದಾಯಕವಾದರೂ, ಇದರ ಲಾಭ ಕೇಳಿದರೆ, ಅಂತಹ ತೊಂದರೆ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ನಿಮೇ ಅನಿಸುತ್ತದೆ. ಕೆಂಪು ಹರಿವೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಪ್ರೊಟೀನ್ ಇರುವುದರಿಂದ ಮೂಳೆ ಗಟ್ಟಿಯಾಗಲು, ರಕ್ತ ದೇಹದಲ್ಲಿ ತುಂಬಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ.