ದೊಡ್ಡಪತ್ರೆ ಗಿಡವನ್ನು ಪ್ರತಿಯೊಬ್ಬರೂ ತಮ್ಮ ಮನೆಯ ಕುಂಡಗಳು ಸೇರಿದಂತೆ ಹಿತ್ತಲಿನಲ್ಲಿ ಬೆಳೆಸುವುದರಿಂದ ಹತ್ತಾರು ಉಪಯೋಗಗಳಿದ್ದು, ಅದರ ಉಪಯೋಗವನ್ನು ಅರಿತು ಬಳಸುತ್ತಾ ಬಂದರೆ ಹತ್ತು ಹಲವು ಆರೋಗ್ಯಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇದರ ಉಪಯೋಗ ತಿಳಿದಿದ್ದರಿಂದಲೇ ಹಿಂದಿನವರು ತಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಸಿಕೊಳ್ಳುತ್ತಿದ್ದರು.
ದೊಡ್ಡಪತ್ರೆ ಅಲಂಕಾರ ಗಿಡವಾಗಿಯೂ ಕೆಲವೊಂದು ರೋಗಗಳಿಗೆ ಔಷಧಿಯಾಗಿ ಬಳಕೆಯಾಗುವುದರಿಂದ ಇದನ್ನು ಬೆಳೆಸುವ ಪ್ರಯತ್ನ ಮಾಡುವುದು ಒಳ್ಳೆಯದು. ದೊಡ್ಡಪತ್ರೆಯನ್ನು ಸಂಬಾರಬಳ್ಳಿ, ಸಾವಿರ ಸಂಬಾರ(ಅಜವಾನದೆಲೆ), ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ನೆಲದ ಮೇಲೆ ಪೊದೆಯಾಗಿ ಬೆಳೆಯುತ್ತದೆ. ಕುಂಡದಲ್ಲಿಯೂ ಯಾವುದೇ ಅಡೆತಡೆಯಿಲ್ಲದೆ ಬೆಳೆಯಬಹುದಾಗಿದೆ. ಎಲೆಗಳು ಹಸಿರಾಗಿ, ದಪ್ಪವಾಗಿರುತ್ತದೆ. ಅಷ್ಟೇ ಅಲ್ಲ ಎಲೆಗಳಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆ.
ಸುವಾಸನೆ ಹೊಂದಿರುವ ದೊಡ್ಡಪತ್ರೆ ವಿಟಿಸ್ ಇಂಡಿಕಾ ಎಂಬ ಸಸ್ಯವರ್ಗಕ್ಕೆ ಸೇರಿದೆ. ಜ್ಯೇಷ್ಠದಿಂದ ಭಾದ್ರಪದದವರೆಗೆ ಎಲೆಗಳು ಹುಲುಸಾಗಿ ಬೆಳೆದಿರುತ್ತವೆ. ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಭಾರತದ ಮಲಬಾರ ತೀರ ಸೇರಿದಂತೆ ಕರ್ನಾಟಕದ ಹೆಚ್ಚಿನ ಕಡೆ ಇದು ಚೆನ್ನಾಗಿ ಬೆಳೆಯುತ್ತದೆ. ಉಷ್ಣವಲಯದ ಏಷಿಯಾ ಮತ್ತು ಆಫ್ರಿಕಾ ಖಂಡದಲ್ಲಿ ಸಾಧಾರಣವಾಗಿ ಇಪ್ಪತ್ತು ಪ್ರಭೇದಗಳಿವೆಯಂತೆ. ಭಾರತದಲ್ಲಿ ಸುಮಾರು ಹದಿಮೂರು ಬಗೆಗಳಿದ್ದು ಅವುಗಳಲ್ಲಿ ಕೆರೆನೋಷಸ್ ವಾಲ್ (Caronosus wall) ಎಂಬ ವರ್ಗ ಹೆಚ್ಚು ಜನಪ್ರಿಯವಾಗಿದ್ದು, ಅದನ್ನೇ ಹೆಚ್ಚಾಗಿ ಬೆಳೆಸುತ್ತಾರೆ. ಪೊದೆಯಂತೆ ಕಾಂಡ ಹರಡಿ ಬೆಳೆಯುವುದರಿಂದ ಸಸ್ಯಾಭಿವೃದ್ಧಿಗೆ ಕಾಂಡವನ್ನು ಬಳಸಬಹುದಾಗಿದೆ.
ದೊಡ್ಡಪತ್ರೆಯು ಮಕ್ಕಳಲ್ಲಿ ಕಂಡು ಬರುವ ಉಬ್ಬಸ ಕಫಗಳ ನಿವಾರಣೆಗೆ ಬಳಸಬಹುದಂತೆ ಅದು ಹೇಗೆಂದರೆ? ಗಿಡದಿಂದ ಎಲೆಗಳನ್ನು ಕೊಯ್ದು ಚೆನ್ನಾಗಿ ತೊಳೆದು ಕೆಂಬೂದಿಯಲ್ಲಿ ಅಥವಾ ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು. ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಕ್ಲೇಷ್ಮ ಬಿಡಿಸುವ ಗುಣವಿರುವುದರಿಂದ ಕಫ, ನೆಗಡಿಯಾಗಿ ಮೂಗು ಕಟ್ಟಿದರೆ ಎಲೆಗಳನ್ನು ಬಿಸಿ ಬೂದಿ ಇರುವ ಒಲೆಯಲ್ಲಿ ಹಾಕಿಬಾಡಿಸಿ ಬಳಿಕ ಎಲೆಯನ್ನು ಹಿಂಡಿ ಅದರಿಂದ ಬರುವ ಮೂರ‍್ನಾಲ್ಕು ತೊಟ್ಟು ರಸವನ್ನು ಜೀರಿಗೆ ಕಷಾಯದಲ್ಲಿ ಹಾಕಿ ಕುಡಿದರೆ ಒಳ್ಳೆಯದಾಗುತ್ತದೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ಧತೆಯಾದರೆ ಎಲೆಗಳ ರಸದಲ್ಲಿ ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ. ಅಷ್ಟೇ ಅಲ್ಲ ಕಣ್ಣುರಿಯೂ ಕಡಿಮೆಯಾಗುತ್ತದೆ. ಇನ್ನು ಬೇಸಿಗೆ ಸಮಯದಲ್ಲಿ ಬಿಗಿಯಾದ ಬಟ್ಟೆ ತೊಡುವುದರಿಂದ ಬೆವರಿನಿಂದ ತುರಿಕೆ, ಕಜ್ಜಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ದೊಡ್ಡಪತ್ರೆ ಎಲೆ, ಅರಶಿನ ಪುಡಿ ಸೇರಿಸಿ ಸೇರಿಸಿ ಬೆಣ್ಣೆಯಲ್ಲಿ ಅರೆದು ಚೆನ್ನಾಗಿ ಕಲೆಸಿ ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ. ಎಲೆಗಳ ರಸವನ್ನು ತೆಗೆದು ಗಂಟೆಗೊಮ್ಮೆ ಒಂದು ಚಮಚದಷ್ಟು ಕಾಯಿಸಿ ಆರಿಸಿದ ನೀರಿನಲ್ಲಿ ಹಾಕಿ ಕುಡಿದರೆ ಕಾಲಾರಾ ಹತೋಟಿಗೆ ಬರುವುದು. ಶೀತ, ಕೆಮ್ಮಿಗೆ ಕಬ್ಬಿನ ರಸದೊಂದಿಗೆ ಎಲೆಗಳ ರಸವನ್ನು ಬೆರೆಸಿ ಕುಡಿಯಬಹುದಾಗಿದೆ.
ತೆಂಗಿನ ಹಾಲಿನೊಂದಿಗೆ ಡೊಡ್ಡಪತ್ರೆ ಬೇರಿಸ ರಸವನ್ನು ಬೆರೆಸಿ ಕುಡಿದರೆ ಅಲ್ಸರ್ ಗುಣವಾಗುತ್ತದೆ ಎನ್ನಲಾಗಿದೆ. ಇನ್ನು ಕುರುನಂತಹ ವೃಣಗಳಾದಾಗ ಬೇರನ್ನು ಜಜ್ಜಿ ಎಣ್ಣೆ ಮತ್ತು ತೆಂಗಿನ ಹಾಲಿನೊಂದಿಗೆ ಬೆರೆಸಿ ಹಚ್ಚಬೇಕು. ಇನ್ನು ಎಲೆಗಳಿಂದ ಚಟ್ನಿ, ತಂಬುಳಿ ಮಾಡಿ ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ.