ಬೆಂಗಳೂರು : ‘ಸೆಂಚುರಿ ಸ್ಟಾರ್’ ಶಿವರಾಜಕುಮಾರ್, ಡಾಲಿ ಧನಂಜಯ ಅಭಿನಯದ ‘ಬೈರಾಗಿ’ ಚಿತ್ರವೀಗ ಅಭಿಮಾನಿಗಳಿಗೆ ಸಂಕ್ರಾಂತಿ ಪ್ರಯುಕ್ತ ಹೊಸ ಉಡುಗೊರೆಯನ್ನು ನೀಡಿದೆ. ಚಿತ್ರೀಕರಣ ಮುಗಿದಿರುವ ವಿಚಾರ ಹೇಳಿಕೊಂಡು, ಹೊಸ ಪೋಸ್ಟರ್ ಸಹ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸಂಕ್ರಮಣದ ಸಿಹಿ ಬೆಲ್ಲ ನೀಡಿದೆ. ತಮಿಳಿನ ಖ್ಯಾತ ಛಾಯಾಗ್ರಾಹಕ ಮತ್ತು ನಿರ್ದೇಶಕ ವಿಜಯ್ ಮಿಲ್ಟನ್ ‘ಬೈರಾಗಿ’ ಮೂಲಕ ಮೊದಲ ಸಲ ಕನ್ನಡಕ್ಕೆ ಆಗಮಿಸಿದ್ದಾರೆ.
ಛಾಯಾಗ್ರಾಹಕರಾಗಿ ‘ಪೊಗರು’ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದ ನಿರ್ದೇಶಕರು, ಇದೀಗ ಕೋವಿಡ್ ಏರಿಳಿತದ ನಡುವೆಯೇ ‘ಬೈರಾಗಿ’ ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ ಶೂಟಿಂಗ್ ಮುಗಿದ ವಿಚಾರವನ್ನು ಸ್ವತಃ ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ತುಣುಕನ್ನು ಶೇರ್ ಮಾಡಿದ್ದರು. ಈಗ ಆ ವಿಚಾರವನ್ನು ಪೋಸ್ಟರ್ ಮೂಲಕ ಅಧಿಕೃತವಾಗಿ ಹೇಳಿ ಶೀಘ್ರದಲ್ಲಿ ಟೀಸರ್ ಮೂಲಕ ಆಗಮಿಸಲಿದ್ದೇವೆ ಎಂಬ ಸುಳಿವನ್ನೂ ನೀಡಿದ್ದಾರೆ. ಶಿವಣ್ಣನ ಜತೆಗೆ ಧನಂಜಯ್ ಮತ್ತು ಪೃಥ್ವಿ ಅಂಬರ್ ಮುಖ್ಯಭೂಮಿಕೆಯಲ್ಲಿದ್ದು, ಶಿವಣ್ಣನಿಗೆ ಅಂಜಲಿ ಜತೆಯಾದರೆ, ಧನಂಜಯ್ಗೆ ಯಶಾ ಶಿವಕುಮಾರ್ ನಾಯಕಿ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ನಿರ್ದೇಶಕರೇ ಛಾಯಾಗ್ರಾಹಕರು.
2017ರಲ್ಲಿ ತಮಿಳಿನಲ್ಲಿ ‘ಕಡುಗು’ ಚಿತ್ರ ತೆರೆಕಂಡಿತ್ತು. ಆ ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದರು. ಒಳ್ಳೇ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದ ಆ ಸಿನಿಮಾವೀಗ ಕನ್ನಡದಲ್ಲಿ ‘ಬೈರಾಗಿ’ ಹೆಸರಿನಲ್ಲಿ ರಿಮೇಕ್ ಆಗಿದೆ.’ದಯವಿಟ್ಟು ಗಮನಿಸಿ’ ಚಿತ್ರ ನಿರ್ವಿುಸಿದ್ದ ಕೃಷ್ಣ ಸಾರ್ಥಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.