News Karnataka Kannada
Wednesday, May 01 2024
ಸಾಂಡಲ್ ವುಡ್

ಇದು ಭರಿಸಲಾಗದ ಶೂನ್ಯ’… ಗೆಳೆಯನ ಕುರಿತು ಸುದೀರ್ಘ ಬರಹ ಹಂಚಿಕೊಂಡ ಕಿಚ್ಚ ಸುದೀಪ್

I support Cm Basavaraj Bommai: Kichcha Sudeep
Photo Credit :

ಪುನೀತ್‌ ರಾಜ್‌ಕುಮಾರ್‌ ಅವರ ನಿಧನ ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅಪ್ಪುವಿನ ಸಾವಿನಿಂದ ಭಾವುಕರಾದ ಕಿಚ್ಚ ಸುದೀಪ್‌ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಅಪ್ಪು ಕುರಿತು ಟ್ವಿಟರ್‌ನಲ್ಲಿ ಸುದೀರ್ಘ ಬರಹವೊಂದನ್ನು ಹಂಚಿಕೊಂಡಿರುವ ಅವರು, ‘ಇದು ಭರಿಸಲಾಗದ ಶೂನ್ಯ’ ಎಂದು ತಿಳಿಸಿದ್ದಾರೆ.

‘A Born Star’ ಎಂಬ ಶೀರ್ಷಿಕೆ ಬರಹವು ಪುನೀತ್‌ ಅವರ ಮೊದಲ ಭೇಟಿಯಿಂದ ಆರಂಭವಾಗುತ್ತದೆ.

‘ಇದು ಬಾಲ್ಯದಿಂದ ಶುರುವಾದ ಪಯಣವಾಗಿದೆ. ಅಪ್ಪು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯಾದಾಗ ಅವರಾಗಲೇ ಸ್ಟಾರ್‌ ಆಗಿದ್ದರು. ಅವರ ನಟನೆಯ ಭಾಗ್ಯವಂತರು ಚಿತ್ರವು ಹಿಟ್‌ ಆಗಿತ್ತು. ಪುನೀತ್‌ ಅವರು ಚಿತ್ರಮಂದಿರ ಭೇಟಿ ಬಳಿಕ ಊಟಕ್ಕೆಂದು ನಮ್ಮ ಮನೆಗೆ ಬಂದಿದ್ದರು. ನಾನು ಮೊದಲ ಬಾರಿ ಅವರನ್ನು ಭೇಟಿಯಾಗಿದ್ದೆ. ನಾವು ಸಮಾನ ವಯಸ್ಸಿನವರಾಗಿದ್ದರಿಂದ ಬೇಗ ಹತ್ತಿರವಾದೆವು. ನಮ್ಮ ಮನೆಯ ಊಟಕ್ಕಿಂತ ನನ್ನ ಗೊಂಬೆಗಳ ಮೇಲೆ ಅಪ್ಪು ಹೆಚ್ಚು ಆಕರ್ಷಿತರಾಗಿದ್ದರು.

ನನಗೀಗಲು ನೆನಪಿದೆ, ಮಹಿಳೆಯೊಬ್ಬರು ನಮ್ಮ ಹಿಂದೆ ಊಟದ ತಟ್ಟೆಯನ್ನು ಹಿಡಿದು ಓಡಾಡುತ್ತಿದ್ದರು. ಆದರೆ, ನಾವು ಊಟಕ್ಕಿಂತ ಹೆಚ್ಚಾಗಿ ಆಟದಲ್ಲಿ ಮುಳುಗಿದ್ದೆವು. ಅವರಲ್ಲಿನ ಉತ್ಸಾಹವು ನನಗೆ ಸ್ಪೂರ್ತಿಯಾಗಿತ್ತು. ಅಷ್ಟರಲ್ಲಾಗಲೇ ನಮ್ಮ ಮನೆಯಲ್ಲಿ ನೆರೆಹೊರೆಯವರು ಜಮಾಯಿಸಿದರು. ಕಾರಣ, ಅಪ್ಪು ಕೇವಲ ಮಗುವಾಗಿರಲಿಲ್ಲ. ಅವರೊಬ್ಬ ಸ್ಟಾರ್‌ ಆಗಿದ್ದರು. ಅಭಿಜಾತ ಕಲಾವಿದರೊಬ್ಬರ ಮಗನಾಗಿದ್ದರು.

ಇದಾದ ನಂತರ ನಾವು ಹಲವು ಸಾರಿ ಭೇಟಿಯಾದೆವು. ಒಂದೇ ವೃತ್ತಿಯಲ್ಲಿ ಸಹೋದ್ಯೋಗಿಗಳಾದೆವು. ಅವರು ನನಗೆ ಕೇವಲ ಸ್ನೇಹಿತರಷ್ಟೇ ಆಗಿ ಉಳಿದಿರಲಿಲ್ಲ. ನನ್ನ ಪ್ರತಿಸ್ಪರ್ಧಿಯೂ ಆಗಿದ್ದರು. ಅವರು ಅಸಾಧಾರಣ ನಟ, ನೃತ್ಯಪಟು, ಹೋರಾಟಗಾರ ಮತ್ತು ಉತ್ತಮ ವ್ಯಕ್ತಿಯಾಗಿದ್ದರು.ಅವರು ನನಗೆ ಒಡ್ಡಿದ ಸ್ಪರ್ಧೆಯ ಬಗ್ಗೆ ಅತ್ಯಂತ ಗೌರವವಿದೆ. ನಾನು ಅತ್ಯುತ್ತಮವಾಗಿ ನಟಿಸಲು ಅವರ ಸ್ಪರ್ಧೆಯೂ ಕಾರಣವಾಗಿದೆ. ಅವರು ನನ್ನ ಸಮಕಾಲೀನ ನಟರಾಗಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ.

ಇಂದು ಚಿತ್ರರಂಗವು ಅಪೂರ್ಣವಾದಂತೆ ಕಾಣುತ್ತಿದೆ. ಸಮಯವು ಕ್ರೂರವಾದಂತೆ, ಸುತ್ತಲೂ ನೋವು ಹರಡಿದಂತೆ ಭಾಸವಾಗುತ್ತಿದೆ. ನಿನ್ನೆಯಿಂದ ನಿಸರ್ಗವೂ ಸಹಿತ ಅಳುತ್ತಿರುವಂತೆ, ಶೋಕದಲ್ಲಿ ಮುಳುಗಿದಂತೆ ತೋರುತ್ತಿದೆ. ಇವತ್ತಿನ ದಿನಕ್ಕೆ ಚುರುಕೆಂಬುದೇ ಇಲ್ಲ. ಕಪ್ಪು ಮೋಡಗಳಿಂದ ಕತ್ತಲು ಆವರಿಸಿದಂತಾಗಿದೆ.

ಕನಸು ಮನಸಿನಲ್ಲೂ ಊಹಿಸದ ವಾಸ್ತವವೊಂದಕ್ಕೆ ನಾನು ಹತ್ತಿರವಾಗುತ್ತಿದ್ದೆ. ಅಪ್ಪು ಅವರನ್ನು ಇಟ್ಟಿರುವ ಜಾಗಕ್ಕೆ ಹೋಗುವಾಗ ನನ್ನ ಉಸಿರು ಭಾರವಾಗಲು ಶುರುವಾಯಿತು.

ಅವರು ಮಲಗಿರುವುದನ್ನು ನೋಡಿದಾಗ ಎದೆಯ ಮೇಲೆ ಮಹಾಪರ್ವತವೇ ಕುಳಿತ ಅನುಭವವಾಯಿತು. ಹಲವು ಪ್ರಶ್ನೆಗಳು ಮತ್ತು ಹಲವು ವಿಚಾರಗಳು ತಲೆಯಲ್ಲಿ ಓಡತೊಡಗಿದವು. ಇದೆಲ್ಲ ಹೇಗೆ? ಇದೆಲ್ಲ ಏಕೆ? ಎಂಬುದರ ಬಗ್ಗೆ ಯೋಚಿಸತೊಡಗಿದೆ.
ಮೊದಲ ಬಾರಿ ನನಗೆ ಸರಿಯಾಗಿ ಉಸಿರಾಡುವುದಕ್ಕೂ ಆಗುತ್ತಿರಲಿಲ್ಲ. ಅವರು ನನಗೆ ಸ್ನೇಹಿತರಾಗಿದ್ದರು.

ಸಹೋದ್ಯೋಗಿಯಾಗಿದ್ದರು. ಈಗವರು ಇರಲೇಬಾರದ ಜಾಗದಲ್ಲಿದ್ದಾರೆ. ಅವರನ್ನು ಬಹಳ ಹೊತ್ತು ನೋಡಲು ನನ್ನಿಂದ ಸಾಧ್ಯವೇ ಆಗಲಿಲ್ಲ.

ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡುವುದು ಇನ್ನಷ್ಟು ನೋವು ತಂದಿತು. ಆಗ ಶಿವಣ್ಣ ನನಗೆ ಹೇಳಿದ್ದಿಷ್ಟೇ, ‘ಅವನು (ಪುನೀತ್‌) ನನಗೆ 13 ವರ್ಷ ಚಿಕ್ಕವನು. ಆತನನ್ನು ನಾನು ಕೈಯಲ್ಲಿ ಎತ್ತಿ ಆಡಿಸಿದ್ದೇನೆ. ಈಗಾಗಲೇ ಬಹಳ ನೋಡಿದ್ದೇನೆ. ಇನ್ನೂ ಏನೇನೂ ನೋಡುವುದಕ್ಕಿದೆಯೋ’ ಎಂದರು.ಈ ಸಾಲುಗಳು ನನ್ನಲ್ಲಿ ಈಗಲೂ ಪ್ರತಿಧ್ವನಿಸುತ್ತಿವೆ. ಎಲ್ಲರಿಗೂ ಆಘಾತವಾಗಿದೆ ಮತ್ತು ನೋವಾಗಿದೆ.

ಇದನ್ನು ಒಪ್ಪಿಕೊಳ್ಳಲು ಬಹಳ ಸಮಯ ಬೇಕಿದೆ. ಇದನ್ನು ನಾವೆಲ್ಲರೂ ಒಪ್ಪಿಕೊಂಡಾಗಲೂ ಆ ಜಾಗವು ಖಾಲಿಯಾಗಿಯೇ ಉಳಿಯಲಿದೆ. ಆ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆ ಜಾಗವು ಆ ಮಹಾನ್‌ ವ್ಯಕ್ತಿಯೊಬ್ಬರಿಗೆ ಮೀಸಲಾಗಿದೆ.
‘ಪುನೀತ್‌….’ ನಮ್ಮ ಪ್ರೀತಿಯ ‘ಅಪ್ಪು’
ಶಾಂತಿಯಿಂದ ಹೊರಡು… ಶಕ್ತಿಯಲ್ಲಿ ಜೀವಿಸು… ನನ್ನ ಗೆಳೆಯನೇ…’

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು