ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಮಂಗಳವಾರ ಸರಣಿ ಸಭೆಗಳು ನಡೆದರೂ ಇದುವರೆಗೆ ಪಟ್ಟಿ ಅಂತಿಮಗೊಂಡಿಲ್ಲ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ವಲಸಿಗರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಹಾಗೂ ಬಹುತೇಕ ಕಡೆ ಎರಡಕ್ಕಿಂತ ಹೆಚ್ಚು ಮಂದಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಿರುವುದು ಅಂತಿಮ ಪಟ್ಟಿ ಸಿದ್ಧಪಡಿಸುವುದಕ್ಕೆ ದೊಡ್ಡ ತಲೆ ನೋವಾಗಿದೆ.
ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರನ್ನೊಳಗೊಂಡ ಕೇಂದ್ರ ಚುನಾವಣಾ ಸಮಿತಿಯು ಎರಡು ಸಲ ಸಭೆ ಸೇರಿದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಮಧ್ಯಾಹ್ನದ ಸಭೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ರಣದೀಪ್ ಸಿಂಗ್ ಸುರ್ಜೇವಾಲ ಅವರು, “ಈ ದಿನವೇ ಪಟ್ಟಿ ಬಿಡುಗಡೆ ಆಗಲಿದೆ’ ಎಂದು ಹೇಳಿದ್ದರು.
ಇಂದು ಸ್ಕ್ರೀನಿಂಗ್ ಕಮಿಟಿ ಸಭೆ: ಕೇಂದ್ರ ಚುನಾವಣಾ ಸಮಿತಿ ಸಭೆಗೂ ಮುನ್ನ ಬೆಂಗಳೂರಿನಲ್ಲಿ ಎರಡೆರಡು ಸಲ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಬಹುತೇಕ ಶೇ.98ರಷ್ಟು ಟಿಕೆಟ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕೇವಲ ಕೇಂದ್ರ ಚುನಾವಣಾ ಸಮಿತಿ ಅನುಮೋದನೆಯಷ್ಟೇ ಬಾಕಿ ಇದೆ. ಯಾವುದೇ ಗದ್ದಲ, ಗೊಂದಲಗಳಿಲ್ಲದೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ದಿಲ್ಲಿಯಲ್ಲಿ ಮಂಗಳವಾರ ಎರಡು ಸಲ ಚುನಾವಣಾ ಸಮಿತಿ ಸಭೆ ಸೇರಿದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಮತ್ತೆ ಬುಧವಾರ ಸಂಜೆ 4 ಗಂಟೆಗೆ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಲು ನಿರ್ಧರಿಸಲಾಗಿದೆ.