News Karnataka Kannada
Monday, April 29 2024
ವಿಶೇಷ

ಹೊಸ ಸಂವತ್ಸರ – ಯುಗಾದಿ ವರ್ಷಾರಂಭದ ಸಂಭ್ರಮೋತ್ಸವ

Ugadi year-beginning celebrations
Photo Credit : By Author

ವಸಂತ ಬಾಹ್ಯ ಸೌಂದರ್ಯಕ್ಕಷ್ಟೇ ಸೀಮಿತವಲ್ಲ. ಅಂತರಾಳ ಬೆಳಗುವ ನಂದಾದೀಪ, ಮಾನವ ಆರಂಭದಲ್ಲಿ ಪ್ರಕೃತಿಯ ಕೂಸಾಗಿದ್ದ. ತಾಯಿ ಪ್ರಕೃತಿಯ ಪ್ರತಿ ಬೆಳವಣಿಗೆಯಲ್ಲೂ ಭಾಗಿ ಆಗುತ್ತಿದ್ದ, ಸಂತಸ ವ್ಯಕ್ತ ಪಡಿಸುತ್ತಿದ್ದ. ಆದರೆ ಆಧುನಿಕ ನಾಗರಿಕತೆ ಅವನನ್ನು ನಿಸರ್ಗದ ನಿನಾದಕ್ಕೆ ಕಿವುಡನನ್ನಾಗಿಸಿದೆ. ಆದರೆ ಪ್ರಕೃತಿ ಮಾತ್ರ ತನ್ನ ಮಹೋನ್ನತೆ ಮರೆತಿಲ್ಲ. ಇದಕ್ಕೆ ಪ್ರತಿವರ್ಷ ತಪ್ಪದೇ ಬರುವ ವಸಂತನಾಗಮನವೇ ಸಾಕ್ಷಿ. ಹಳೆಯದನ್ನು ಕಳಚಿ ಹೊಸದನ್ನು ಧರಿಸಿ ಸಂಭ್ರಮಿಸುವ ಪ್ರಕೃತಿಯ ನೀತಿ ನಿತ್ಯ ನಿರಂತರ. ಕವಿ ಬೇಂದ್ರೆ ಹಾಡುತ್ತಾರೆ-‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’.

ಕಾಲಗಣನೆ:
ಭಾರತಿಯರ ಕಾಲ ಗಣನೆ ಯುಗಾದಿಯಿಂದಲೇ ಆರಂಭ, ಭಾರತಿಯ ಬಹುತೇಕ ಎಲ್ಲ ಹಬ್ಬಗಳಿಗಗೆ ಪೌರಾಣಿಕ ಘಟನೆಗಳೇ ಮೂಲಾಧಾರವಾಗಿದ್ದರೆ ಯುಗಾದಿ ಮಾತ್ರ ಇದಕ್ಕೆ ಹೊರತಾಗಿದೆ, ಆದರೆ ಕಾಲದ ಗತಿಯಲ್ಲಿ ಕೆಲ ಪೌರಾಣಿಕ ಘಟನೆಗಳೂ ಇದಕ್ಕೆ ತಳಕು ಹಾಕಿ ಕೊಂಡಿದ್ದನ್ನು ಮರೆಯಲಾಗದು. ಯುಗಾದಿ ಕಾಲಗಣನೆಯ ಪ್ರಮುಖ ಆಧಾರವಾಗಿ ಆಚರಣೆಯಲ್ಲಿದೆ. ಯುಗಾದಿ-ಉಗಾದಿ ಎಂದರೆ ಕಾಲ; ವರುಷ, ಯುಗದ ಆದಿ ಉಗಾದಿ, ಅಂದರೆ ವರ್ಷದ ಆರಂಭವೇ ಯುಗಾದಿ, ಕಾಲರಾಯರು ನಿತ್ಯ ನಿರಂತರ ಅನಿರ್ಬಂಧಿತ ಚಲನೆಯಲ್ಲಿರುತ್ತಾನೆ. ಅವನ ಚಲನೆ ಪ್ರಕೃತಿ ಮತ್ತು ಜೀವಜಂತುಗಳಲ್ಲಿ ಬದಲಾವಣೆಯ ಬಿರುಗಾಳಿ, ಆರಂಭಗೊಂಡದ್ದು ಅಂತ್ಯ ಆಗಲೇಬೇಕು. ಆದರೆ ಎಲ್ಲಿ ಆರಂಭ? ಎಲ್ಲಿ ಅಂತ್ಯ? ಎಂಬುದರ ಲೆಕ್ಕಾಚರವೇ ಕಾಲಗಣನೆ, ಕಾಡಿನಿಂದ ನಾಡಿಗೆ ಬ೦ದ ಮಾನವ ಬಿತ್ತಿ ಬೆಳೆಯುವ ಸಂಸ್ಕೃತಿಯಿಂದ ನಾಗರಿಕತೆಗೆ ನಾಂದಿ ಹಾಡಿದ, ದೇಶ – ಕಾಲ – ಪರಿಸ್ಥಿತಿಗಳನ್ನು ತನ್ನ ಅಂಕಿತದಲ್ಲಿಟ್ಟುಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಲೇ ತನಗರಿವಿಲ್ಲದೇ ಆದೇ ಕಾಲಚಕದಲ್ಲಿ ಅಂತ್ಯ-ಆರಂಭಗಳನ್ನು ಕಾಣುತ್ತಿದ್ದಾನೆ.

ಕಾಲರಾಯ ಸೃಷ್ಟಿ-ಸ್ಥಿತಿ-ಲಯಗಳ ಸೂತ್ರದಾರ, ಮಾನವ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಕಾಲಗಣನೆಗೆ ಮುಂದಾದ, ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನೇ ಆಧಾರವಾಟ್ಟುಕೊಂಡು ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಗಳನ್ನು ಗುರುತಿಸಿಕೊಂಡ, ಋತುಚಕ್ರವನ್ನು ಅರಿತುಕೊಂಡ, ಚುಕ್ಕಿ ನಕ್ಷತ್ರಗಳ ಸಹಾಯದಿಂದ ತಿಥಿ, ಹುಣ್ಣಿಮೆ, ಅಮಾವಾಸ್ಯೆ, ವಾರ, ತಿಂಗಳುಗಳನ್ನು ಲೆಕ್ಕ ಹಾಕಿದ ಕಾಲ ಅಮೂರ್ತ, ಅದು ಯಾರ ಕೈಗೂ ಸಿಗದು. ಆದರೂ ಅದನ್ನು ನಮ್ಮ ಬುದ್ಧಿವಂತ ಪೂರ್ವಿಕರು ತಮ್ಮದೇ ರೀತಿಯಲ್ಲಿ ತುಂಡು ತುಂಡಾಗಿ ಕತ್ತರಿಸಿದರು. ಕಲ್ಪ-ಮನ್ವಂತರ-ಯುಗ- ವರ್ಷ ಋತು-ಮಾಸ-ದಿನಗಳಾಗಿ ಗುರುತಿಸಿಕೊಂಡು ಕಾಲಚಕ್ರಕ್ಕೊಂದು ತಮ್ಮದೇ ಆದ ಸ್ವರೂಪ ನೀಡಿದರು. ಈ ಸ್ವರೂಪದಲ್ಲಿ ನಿಸರ್ಗದ ನಿರಂತರತೆ ಇದೆ: ಪ್ರಕೃತಿಯ ಪರಾಕಾಷ್ಠತೆ ಇದೆ: ಭರತಭೂಮಿಯ ಹಿರಿಮೆ ಇದೆ. ಈ ಕಾಲಗಣನೆಯ ಶುಭಾರಂಭವೇ ಚೈತ್ರ ಶಾಸ್ತ್ರ ಪಾಡ್ಯಮಿ ಯುಗಾದಿ.

ವಸಂತ ಋತುವಿನ ಆಗಮನದೊಂದಿಗೆ ಬರುವ ಯುಗಾದಿ ಹಿಂದೂಗಳ ದೃಷ್ಟಿಯಿಂದ ತುಂಬ ಮಹತ್ವದ್ದು, ಜಗತ್ ಸೃಷ್ಟಿ ಅದುದು ಚೈತ್ರಶುದ್ಧ ಪಾಡ್ಯಮಿಯಂದು ಎಂಬುದು ಹಿಂದೂಗಳ ಬಲವಾದ ನಂಬಿಕೆ, ಚೈತ್ರಮಾಸದ ಶುಕ್ಲಪಕ್ಷದ ಪಥಮ ದಿನ ಸೂರ್ಯೋದಯದ ವೇಳೆಗೆ ಬ್ರಹ್ಮನು ಜಗತ್ತನ್ನು ಸಮಗ್ರವಾಗಿ ಸೃಷ್ಟಿಸಿದ ದಿನದ ಉತ್ಸವವೇ ಯುಗಾದಿ.

ಹಿನ್ನೆಲೆ:
ಯುಗಾದಿ ಪ್ರಕೃತಿ ಆಧಾರಿತ ಹಬ್ಬ. ಚಳಿಗಾಲದಲ್ಲಿ ಚಳಿಯಿಂದ ನಡುಗುತ್ತಿದ್ದ ಭೂಮಿ, ತನ್ನ ಚೆಲುವು-ಚೇತನಗಳನ್ನೆಲ್ಲ ಮುಚ್ಚಿಟ್ಟು ಮುದುಡಿಕೊಂಡಿದ್ದ ಸಸ್ಯಲೋಕ, ತಮ್ಮ ಕಂಠಶ್ರೀಯನ್ನು ಮರೆತು ಮೌನವಾಗಿದ್ದ ಪಕ್ಷಿ ಪ್ರಪಂಚ, ಸೃಜನಶೀಲತೆಯನ್ನೇ ಸಾಯಿಸಿ ತೆಪ್ಪಗಿದ್ದ ಜೀವ ಸಂಕುಲ ವಸಂತನಾಗಮನದೊಂದಿಗೆ ಮತ್ತೆ ಕ್ರಿಯಾತ್ಮಕವಾಗುವ ಪರ್ವಕಾಲದ ಪ್ರತೀಕವೇ ಯುಗಾದಿ, ಹೋಳೆಯ ಬೆಂಕಿಯಲ್ಲಿ ಹಳೆಯದನ್ನೆಲ್ಲ ಸುಟ್ಟು ಹೊಸತನಕ್ಕೆ ನಾಂದಿ ಹಾಡುವ ಹೊಸ ವರ್ಷಾರಂಭವೇ ಯುಗಾದಿ.

ಬರಡಾದ ಗಿಡಮರಗಳಲ್ಲಿ ಹೊಸ ಜೀವಕಳೆ ತುಂಬುತ್ತಿರಲು, ನಿಸರ್ಗದೇವಿ ಹಸಿರುಡುಗೆಯುಟ್ಟು ಹಸಿರು ಹಸ ಹೊಯ್ಯುತ್ತಿರಲು, ಕೋಗಿಲೆಗಳು ತಮ್ಮ ಇಂಪಾದ ವಸಂತ ನಾಗಮನವನ್ನು ಕೂಗಿ ಹೇಳುತ್ತಿರಲು ಬಂದ ವಸಂತ ತಾ ಬಂದ, ನವಪ್ರೇಮಿ- ದಂಪತಿಗಳಿಗೆ ಮುದವನ್ನು ತಂದ, ನವಚೈತನ್ಯವನ್ನು ಚಿಮ್ಮಿಸುತ್ತ ನಿಂದ, ಇಡೀ ಪ್ರಕೃತಿಗೆ ಮೋಹಕತೆಯ ಮಾಯಾಜಾಲವನ್ನು ಬೀಸಿದ. ಜೀವಸಂಕುಲಕ್ಕೆ ಶೃಂಗಾರ ರಸವನ್ನು ಎರಚಿದ, ಎಲ್ಲೆಡೆ ಹೊಸ ಚೈತನ್ಯದ ಸಾಕ್ಷಾತ್ಕಾರ, ಪ್ರತಿವರ್ಷ ಈ ಹೊಸ ಚೈತನ್ಯವನ್ನು, ಹೊತ್ತು ತರುವುದೇ ಯುಗಾದಿ.

ಎಲ್ಲ ಹಬ್ಬಗಳಿಗೂ ಒಂದು ಪೌರಾಣಿಕ ಹಿನ್ನೆಲೆ ಇರುವಂತೆ ಯುಗಾದಿ ಹಬ್ಬಕ್ಕೂ ಒಂದು ಹಿನ್ನೆಲೆ ಇದೆ. ಪಾಲ್ಗುಣ ಬಹುಳ ಅಮವಾಸ್ಯೆಯ ಅಂತಿಮ ಭಾಗದಲ್ಲಿ ಲೋಕಕಂಟಕ ರಾವಣನ ನಿಗ್ರಹವಾಯಿತು. ಸಂಪ್ರೀತನಾದ ಪುರುಷೋತ್ತಮ ಶ್ರೀರಾಮಚಂದ್ರನು ಚೈತ್ರಶುದ್ಧ ಪಾಡ್ಯಮಿಯಂದು ತನ್ನ ಸೇನೆಗೆ ವಿಜಯೋತ್ಸವ ಆಚರಿಸಲು ಕರೆ ನೀಡಿದ. ಸೈನಿಕರಿಂದ ಅತ್ಯಂತ ಸಡಗರ-ಸಂಭ್ರಮದಿಂದ ವಿಜಯೋತ್ಸವ ಆಚರಿಸಲ್ಪಟ್ಟಿತು. ಆದು ರಾವಣನೆಂಬ ದುಷ್ಟಶಕ್ತಿಯ ವಿರುದ್ಧ ವಿಜಯದ ಸಂಕೇತೋತ್ಸವವಾಗಿತ್ತು. ಇದೇ ಯುಗಾದಿ ಹಬ್ಬದಾಚರಣೆಗೆ ಮೂಲ ಎನ್ನಲಾಗಿದೆ.

ಆಚರಣೆ ವಿಧಿ:
‘ಉಂಡದ್ದೇ ಯುಗಾದಿ ಮಿಂದದ್ದೇ ದೀಪಾವಳಿ’ ಎಂಬ ಅನುಭವಜನ್ಯ ಮಾತೊಂದಿದೆ. ದೀಪಾವಳಿಯಲ್ಲಿ ಅಭ್ಯಂಜನ ಸ್ನಾನಕ್ಕೆ ಹೆಚ್ಚು ಮಹತ್ವವಿದ್ದರೆ ಯುಗಾದಿ ವಿವಿಧ ಭಕ್ಷ್ಯಗಳ ಭಕ್ಷಣೆಗೆ ಪ್ರಸಿದ್ಧ. ಯುಗಾದಿಯ ಸಮಯಕ್ಕೆ ರೈತಬಾಂಧವರು ಸುಗ್ಗಿಯ ಕೆಲಸ ಮುಗಿಸಿ, ಬೆವರು ಸುರಿಸಿ ಬೆಳೆದ ದವಸ-ಧಾನ್ಯಗಳನ್ನು ಸಡಗರ- ಸಂಭ್ರಮದಿಂದ ಮನೆ ತುಂಬಿಸಿಕೊಂಡ ಖುಷಿಯಲ್ಲಿರುತ್ತಾರೆ. ಈ ಸಂತಸದಲ್ಲೇ ಬರುವ ಯುಗಾದಿ ಉಂಡು ಮೆರೆಯುವ ಹಬ್ಬವಾದುದು ಸ್ವಾಭಾವಿಕವೇ ಆಗಿದೆ.

ಯುಗಾದಿ ಯಾವುದೇ ಕಾರ್ಯ ಮಾಡಲು ಶುಭದಿನವಾಗಿದೆ. ಹೊಸ ಅಂಗಡಿ ತೆರೆಯಲು, ಗೃಹ ಪ್ರವೇಶ ಮಾಡಲು,……. ಯಾವುದೇ ಕಾರ್ಯ ಆರಂಭಿಸಲು ಯುಗಾದಿ ದಿನ ಮುಹೂರ್ತ ನೋಡುವ ಅವಶ್ಯಕತೆಯಿಲ್ಲ. ಯುಗಾದಿ ಹಬ್ಬದಾಚರಣೆಯನ್ನು ಕುರಿತು ಧರ್ಮಶಾಸ್ತ್ರ ಹೀಗೆ ಹೇಳುತ್ತದೆ- ‘ಯುಗಾದಿಯ ದಿನದಂದು ಉಷಃಕಾಲದಲ್ಲಿ ಎದ್ದು ಮಂಗಳ ಸ್ನಾನ ಮಾಡಿ, ನೂತನ ವಸ್ತ್ರಗಳನ್ನು ಧರಿಸಿ, ವಯೋವೃದ್ಧರೂ, ಜ್ಞಾನವೃದ್ಧರೂ ಆದ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ದೇವಿನ ಹೂವು ಮತ್ತು ಚಿಗುರು ತಿಂದು, ಬಂದು- ಮಿತ್ರಾದಿಗಳೊಂದಿಗೆ ದೈವಜ್ಞರ ಸಭೆಯಲ್ಲಿ ಕುಳಿತು ಹೊಸ ವರ್ಷದ ಫಲಗಳನ್ನು ಕೇಳಬೇಕು.’

ಬೇವು ಬೆಲ್ಲ ಪ್ರಾಶನ:
ದೇವು-ಬೆಲ್ಲಗಳ ಮಿಶ್ರಣದ ಪ್ರಾಶನ ಯುಗಾದಿ ಹಬ್ಬದ ಪ್ರಮುಖ ವಿಧಿ, ನಮ್ಮ ಪ್ರತಿಯೊಂದು ಹಬ್ಬ- ಹರಿದಿನ ಆಚರಣೆಗಳು ಮನುಕುಲಕ್ಕೊಂದು ಸಂದೇಶ ಸಾರುವುದರ ಜೊತೆಗೆ ಆರೋಗ್ಯದ ಬಗೆಗೂ ತಿಳಿ ಹೇಳುತ್ತವೆ. ಬೇವು-ಬೆಲ್ಲ ಮಿಶ್ರಣದ ಸೇವನೆ ಬದುಕಿನ ಸಿಹಿ-ಕಹಿ ಸುಖ-ದುಃಖಗಳ ಪ್ರತೀಕ. ಹಸಿ-ಬಿಸಿ, ಸೋಲು-ಗೆಲುವು, ಕಷ್ಟ-ಸುಖ, ರಾತ್ರಿ ಹಗಲು- ಇವುಗಳಿಂದ ಬದುಕು ಬದಲಾಗಿಲ್ಲ, ಇವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮಾನವ ಬದುಕಬೇಕು, ಸುಖ- ದುಃಖಗಳನ್ನು ಸಮನಾಗಿ ಕಾಣುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಇಂಥಹ ಸಂದೇಶ ಸೂಚಕವೇ ಬೇವು- ಬೆಲ್ಲ ಪ್ರಾಶನ.

ಬೇವು-ಬೆಲ್ಲ ಸೇವನೆಯಲ್ಲಿ ಆರೋಗ್ಯ ಸಂದೇಶವೂ ಇದೆ. ಬೇವು ಮಂಗಲಕರವೂ ಹೌದು, ಆರೋಗ್ಯದಾಯಕವೂ ಹೌದು, ಹಿಂದೂಗಳು ದೇವನ್ನು ಪುರುಷ ಶಕ್ತಿಯ ದೇವತಾ ಸ್ವರೂಪಿ ಎಂದು ನಂಬಿದ್ದಾರೆ. ಶಾಸ್ತ್ರ ಸಂಪ್ರದಾಯದಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನಮಾನವಿದೆ. ಆಯುರ್ವೇದ ಶಾಸ್ತ್ರದಲ್ಲಿ ದೇವಿಗೆ ಅಗ್ರ ಸ್ಥಾನ. ಬೇವು ಆಡಿಯಿಂದ ಮುಡಿಯವರೆಗೂ ಆರೋಗ್ಯದಾಯಕ ಗುಣಗಳನ್ನು ಹೊಂದಿದೆ.

ಯುಗಾದಿ ಹೊಸ ಹೊಸ ಆಶೋತ್ತರಗಳಿಂದ ಹೊಸ ವರ್ಷವನ್ನು ಆಚರಿಸುವ ಹಬ್ಬ. ನವವಸನಧಾರಣ, ಗುರು-ಹಿರಿಯರಿಗೆ ಅಭಿವಾದನ, ಪಂಚಾಂಗ ಶ್ರವಣ, ಸಿಹಿ ತಿಂಡಿಗಳ ಭಕ್ಷಣ- ಇವೆಲ್ಲ ನಮ್ಮ ದೈನಂದಿನ ಬದುಕಿಗೆ ಹೊಸ ಅರ್ಥ ನೀಡುತ್ತವೆ. ಬನ್ನಿ, ಹೊಸ ವರ್ಷದ ಹೊಸ ದಿನದ ಸಂಭ್ರಮದಲ್ಲಿ ನಾವೂ ಭಾಗಿಯಾಗೋಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು