News Karnataka Kannada
Saturday, April 13 2024
Cricket
ನುಡಿಚಿತ್ರ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಗೆ ಸುವರ್ಣಯುಗವೇ?

Photo Credit :

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಗೆ ಸುವರ್ಣಯುಗವೇ?

ಹಲವಾರು ವರುಷಗಳಿಂದ ಕೇಳಿ ಬರುತ್ತಿದ್ದ ಶಿಕ್ಷಣ ವ್ಯವಸ್ಥೆ ಬದಲಾಗಬೇಕೆಂಬ ಕೂಗು ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾವಣೆಗೆ ಕಾರಣವಾಗಿದೆ. ಕೊರೊನಾ ಸಂಕಷ್ಟದ ನಡುವೆ ಶಿಕ್ಷಣ ಕ್ಷೇತ್ರ ಅತಂತ್ರವಾಗಿದೆ. ವಿದ್ಯಾರ್ಥಿಗಳಿಗೆ ಏಕ ರೂಪದ ಶಿಕ್ಷಣ ವ್ಯವಸ್ಥೆ ಇಲ್ಲದೆ ಇದ್ದುದರಿಂದ  ಹಳ್ಳಿಯ ಮಕ್ಕಳು ಹಳ್ಳಿಗುಗ್ಗುಗಳಾಗಿಯೇ ಉಳಿದರು. ಪೇಟೆಯ ತಲೆಗಳು ಭತ್ತದ ರಾಶಿ ಹಾಕಿದಂತೆ ಹಲವಾರು ಪಾಂಡಿತ್ಯ ಪಡೆಯುವುದರಲ್ಲಿಯೇ ಉಳಿದು ಬಿಟ್ಟಿದ್ದಾರೆ. ಬಹುಶಃ ಗ್ರಾಮೀಣ ಭಾಗದ ಮಕ್ಕಳಿಗೆ ಇ-ಕಲಿಕೆಯ ಗಂಧ ಗಾಳಿ ಇಲ್ಲದಿರುವುದು ಇಂತಹ ಗೋಜಲಿಗೆ ಕಾರಣವಾಗಿರಬಹುದು.

ಇನ್ನೊಂದೆಡೆ ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಓರ್ವ ಯುವಕ ತನ್ನ ವೃತ್ತಿ ಜೀವನಕ್ಕೆ ಬೇಕಾದನ್ನು ಮಾತ್ರವೇ ಆರಿಸಿ ಕಲಿಯುವ ಅವಕಾಶವೇ ಇರಲಿಲ್ಲ. ಪಿಯುಸಿ, ಡಿಗ್ರಿ ಪದವಿಗಳಿಗೆ ಅಷ್ಟೊಂದು ಮಾನ್ಯತೆಯೂ ಇಲ್ಲ. ಅವನು ಕಲಿತು ಕೆಲಸ ಸಿಗುವ ಹೊತ್ತಿಗೆ ಹೆತ್ತವರು ಹೈರಾಣವಾಗುತ್ತಾರೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಏಕ ರೂಪದ ಶುಲ್ಕ ವ್ಯವಸ್ಥೆ ಇಲ್ಲದೇ ಇರುವುದು ಕೂಡ ಮತ್ತೊಂದು ತೊಂದರೆ ಹೌದು. ಇನ್ನು ವಿದ್ಯಾರ್ಥಿಗಳು ಹೆಸರಿಗೆ ಪದವಿ ಪಡೆಯುತ್ತಾರೆ ಅಥವಾ ಅಂಕಗಳಿಂದ ಅವರ ಭವಿಷ್ಯ ನಿರ್ಧರಿತವಾಗುತ್ತದೆ. ಸರಿಯಾಗಿ ನೋಡಲು ಹೋದರೆ ಡಿಗ್ರಿ ಪಡೆದ ಯುವಕರಿಗೆ ಪ್ರಾದೇಶಿಕ ಭಾಷೆಯಲ್ಲಿ ಸರಿಯಾಗಿ ನಾಲ್ಕು ಅಕ್ಷರ ಓದಲು ಬರುವುದಿಲ್ಲ…! ಹಾಗಿದ್ರೆ ಅವರು ಪಡೆದ ಶಿಕ್ಷಣ ಕೇವಲ ವೃತ್ತಿಗೋಸ್ಕರವೇ?. ಬದುಕಿನ ಮೌಲ್ಯಗಳು, ಪ್ರಾದೇಶಿಕ ಭಾಷಾ ಜ್ಞಾನ ಇವೆಲ್ಲವು ಇಲ್ಲದೇ ಹೋದರೆ ಅಂತಹ ಶಿಕ್ಷಣ ವ್ಯವಸ್ಥೆ ಪರಿಣಾಮಕಾರಿಯಾಗಿರಲು ಸಾಧ್ಯವೇ?

ಇಂದಿನ ಯುವಸಮಾಜ ಸಂದರ್ಶನದಲ್ಲಿ ಪಾಲ್ಗೊಳ್ಳುವ ಕೌಶಲ್ಯತೆಯನ್ನು ಹೆಚ್ಚಾಗಿ ಬೆಳೆಸಿಕೊಂಡಿಲ್ಲ ಕಾರಣ ಇಂಟರ್ವ್ಯೂಗಳನ್ನು ಎದುರಿಸಲು ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಬೇಕಾದ ಸಿದ್ಧತೆಗಳು ಆರಂಭದ ಹಂತದಲ್ಲಿಯೇ ಯುವ ಪೀಳಿಗೆಗೆ ದೊರೆಯಬೇಕು. ಇದರರ್ಥ ಎಲ್ಲಾ ರೀತಿಯ ಕೌಶಲ್ಯಗಳ ಪರಿಚಯ ಇರಬೇಕು. ಸಮಾಜ-ವಿಜ್ಞಾನ, ಗಣಿತದಂತಹ ವಿಷಯಗಳೊಂದಿಗೆ ಜೀವನಕ್ಕೆ ಅಗತ್ಯವಿರುವ ಮೌಲ್ಯಗಳು, ಸಣ್ಣ ಪುಟ್ಟ ಕೆಲಸಗಳ ತರಬೇತಿ, ಸಾಮನ್ಯ ಜ್ಞಾನ ಮುಂತಾದವುಗಳನ್ನು ಅಡಿಪಾಯವಾಗಿ ಹಾಕಿದಾಗ ಮಾತ್ರ ಮುಂದೊಂದು ದಿನ ಧೈರ್ಯವಾಗಿ ಇಂಟರ್ವ್ಯೂ ಎದುರಿಸಲು ಸಾಧ್ಯ.

ಹೊಸ ಶಿಕ್ಷಣ ನೀತಿಯಿಂದ ಮಕ್ಕಳು ಆರಂಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯಸಿಸಬಹುದು. ಬೆಳೆಯುತ್ತಾ ಹೋದಂತೆ ಮಕ್ಕಳಲ್ಲಿ ಸ್ವತಂತ್ರ್ಯ ಅನ್ವೇಷಣೆ ಮತ್ತು ಜೀವನೋಪಾಯಕ್ಕೆ ತಯಾರಿಯನ್ನು ಅವರೇ ನಿರ್ವಹಿಸುವ ಕ್ಷಮತೆ ಹೆಚ್ಚುತ್ತದೆ. ಎಲ್ಲಾ ವಿಷಯಗಳಿಗೂ ಸಮಾನಆ ಒತ್ತು ಆ ನೀಡುವುದರಿಂದ ಶಾಲಾ ಮಟ್ಟದಲ್ಲೇ ವೃತ್ತಿಪರ ಶಿಕ್ಷಣದ ಅಡಿಪಾಯ ದೊರೆಯುತ್ತದೆ. ಇದರೊಂದಿಗೆ ಪ್ರಬಲ ವೃತ್ತಿಪರ ಶಿಕ್ಷಕರ ಸಮುದಾಯವು ಸೃಷ್ಟಿಯಾಗುತ್ತದೆ. ವಿವಿಗಳು ಮತ್ತು ಕಾಲೇಜುಗಳು ಏಕೀಕರಣಗೊಂಡಾಗ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳಾಗಿ ಪರಿವರ್ತನೆಯಾಗುತ್ತವೆ ಉದಾಹರಣೆಗೆ ವಿಜ್ಞಾನ ವಿದ್ಯಾರ್ಥಿಗಳು ಕಲಾ ವಿಷಯವನ್ನು ಒಂದು ಭಾಗವಾಗಿ ಕಲಿಯಬಹುದು. ವಾಣಿಜ್ಯ ವಿದ್ಯಾರ್ಥಿಗಳು ಇತಿಹಾಸವನ್ನೂ, ರಸಾಯನ ಶಾಸ್ತ್ರವನ್ನೂ ಹೀಗೆ ಅವರ ಮೂಲ ಕೋರ್ಸ್ ನೊಂದಿಗೆ ಇನ್ನೊಂದು ವಿಷಯವನ್ನು ಜೊತೆಗೆ ಕಲಿಯಬಹುದು ಇದರಿಂದ ವಿಜ್ಞಾನ ವಿಷಯ ಆರಿಸಿಕೊಂಡವರು ಮಾತ್ರವೇ ಬುದ್ಧಿವಂತರು ಅನ್ನುವ ಕುರುಡು ಆಲೋಚನೆ ದೂರವಾಗಬಹುದು. ಕಲಾ ವಿದ್ಯಾರ್ಥಿಗಳಿಗೂ ವಿಜ್ಞಾನ ವಿಷಯಗಳ  ಜ್ಞಾನ ಸಿಗುವಂತೆ ಆಗುತ್ತದೆ.

ಕೆಲವೊಂದು ವೃತ್ತಿಪರ ಕೋರ್ಸ್ ಗಳು ಕಡ್ಡಾಯವಾಗಿ ಇಂತಿಷ್ಟೇ ವರ್ಷದ್ದು ಎಂಬುದಾಗಿ ಇರುತ್ತದೆ. ಆದರೆ ಒಬ್ಬ ಯುವಕನಿಗೆ ಆ ವೃತ್ತಿ ಮಾಡುವ ಸಾಮರ್ಥ್ಯ ಅದಾಗಲೇ ಇರುವಾಗ ಆತ ಕನಿಷ್ಠ 2 ವರ್ಷದ ನಂತರ ಆ ಕೋರ್ಸ್ ಬಿಟ್ಟರೆ ಆತ ಕಲಿತ ಸಮಯಕ್ಕೆ ತಕ್ಕಷ್ಟು ಪ್ರಮಾಣ ಪತ್ರ ನೀಡಲಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಮಂಡಳಿ ಪರೀಕ್ಷೆ ಮಾದರಿಯಲ್ಲಿ 2 ಬಾರಿ ಪರೀಕ್ಷೆ ನಡೆಸುವುದರಿಂದ ಯುವಜನರು ಪರೀಕ್ಷೆಗಳನ್ನು ಎದುರಿಸಲು ಸಜ್ಜಾಗಿರುತ್ತಾರೆ. ವೃತ್ತಿಪರ ಶಿಕ್ಷಣವನ್ನು ಪೂರ್ವಭಾವಿಯಾಗಿ ಸ್ವಲ್ಪ ಸ್ವಲ್ಪವೇ ಕಲಿಯುವುದರಿಂದ ವೃತ್ತಿಪರ ಕೋರ್ಸ್ ಗಳಲ್ಲಿ ನಿರಾಯಾಸವಾಗಿ ಮುಂದುವರಿಯಬಹುದು. ಹಾಗಾಗಿ ಶಿಕ್ಷಣದ ಹೊರೆ ಕಡಿಮೆಯಾಗುತ್ತದೆ ಆದರೆ ಗುಣಮಟ್ಟ ಹೆಚ್ಚಿರುತ್ತದೆ.

ಕ್ವಾಲಿಟಿ ಆಫ್ ಎಜುಕೇಶನ್ ಎನ್ನುವುದರ ಬಗ್ಗೆ ನಾವೆಲ್ಲ ಮಾತನಾಡಿಯೇ ಇರುತ್ತೇವೆ. ನಾವೆಲ್ಲ ಪಡೆದದ್ದು ಕ್ವಾಲಿಟಿ ಅಥವಾ ಗುಣಮಟ್ಟದ ಶಿಕ್ಷಣವಾದರೆ ನಮ್ಮಲ್ಲಿ ಪಿಯುಸಿ ಆದ ಅದೆಷ್ಟು ಜನರಿಗೆ ಕೃಷಿ ಕೆಲಸ ಅಲ್ಪ ಸ್ವಲ್ಪವಾದರೂ ತಿಳಿದಿದೆ?, ಅದೆಷ್ಟು ಜನರಿಗೆ ಪಶು ಸಂಗೋಪನೆ, ಹೈನುಗಾರಿಕೆ ಬಗ್ಗೆ ತಿಳಿದಿದೆ?, ಎಷ್ಟು ಜನ ಯುವಕರಿಗೆ ತಮ್ಮ ಮನೆಯ ಸಣ್ಣ ಪುಟ್ಟ ಎಲೆಕ್ಟ್ರಿಕ್ ವಯರಿಂಗ್ ಕೆಲಸ ತಿಳಿದಿದೆ? ಒಂದು ಬಲ್ಬ್ ಹಾಳಾದರೂ ಅದನ್ನು ಬದಲಾಯಿಸಲು ತಿಳಿಯದ ಬುದ್ದಿವಂತ ಶಿಕ್ಷಿತರೂ ಇದ್ದಾರೆ ಎಂದರೆ ಒಪ್ಪುತ್ತೀರಾ?

 

ಮನೆಯಲ್ಲಿ ಪೈಪ್ ಹಾಳಾಗಿ ನೀರು ಬಾರದಿದ್ದರೆ ಅಕ್ಷರ ಜ್ಞಾನ ಇಲ್ಲದೇ ಇರುವ(ಕೆಲವರು) ಪ್ಲoಬರ್ ಬೇಕು. ಹಾಗಿದ್ರೆ ಆತ ಅವನ ವೃತ್ತಿ ಶಿಕ್ಷಣ ಎಲ್ಲಿ ಪಡೆದಿರಬಹುದು? ಸಣ್ಣ ಪುಟ್ಟ ಮೆಕ್ಯಾನಿಕ್ ಗಳಿಗೆ ಇಂಗ್ಲೀಷ್ ಓದಲು ಬರೆಯಲು ತಿಳಿದಿಲ್ಲವಾದರೂ ಎಷ್ಟೋ ಜನ ಬೈಕ್, ಕಾರು ಮಾದರಿಗಳನ್ನು ಮಾಡಿ ಸಾಧಿಸಿದವರು ಇದ್ದಾರೆ. ಹಾಗಿದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಂಜಿನಿಯರಿಂಗ್ ಪದವಿ ಪಡೆದ ಪದವೀದರರು ಎಲ್ಲಿ ಹೋದರು.  ಶಾಲೆಯ ಮೆಟ್ಟಿಲು ಹತ್ತದವರೇ ಈ ಸಾಧನೆ ಮಾಡಿದಾಗ ಶಾಲೆಗೆ ಹೋಗಿಯು ಈ ಕೆಲಸ ಮಾಡಲಾಗದೆ ಇದ್ದರೆ ನಾವು ಪಡೆದ ಶಿಕ್ಷಣ ಯಾವ ರೀತಿಯದ್ದು ? ಬಹುಶಃ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಇದೆ. ಶಿಕ್ಷಣದ  ಅಡಿಪಾಯ ಮಾತೃ ಭಾಷೆಯಲ್ಲಿ ಇರುವುದು ಮುಂದೆ ದೊಡ್ಡದಾದ ಕಟ್ಟಡ ಕಟ್ಟುವುದಕ್ಕೆ ಸಹಕಾರಿಯಗಬಹುದು. ನಮಗೆ  ನಮ್ಮ ಭಾಷೆಯಲ್ಲಿ ಕಲಿತದ್ದೇ ಅರಗುವುದು. ಮನೆಯ ಊಟದಿಂದ ಅಜೀರ್ಣವಾಗಲು ಸಾಧ್ಯವೇ..!!

ದುರ್ಗಾ ಭಟ್ ಬೊಳ್ಳುರೋಡಿ

ಆಳ್ವಾಸ್ ಕಾಲೇಜು, ಮೂಡುಬಿದಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು