News Karnataka Kannada
Monday, April 22 2024
Cricket
ನುಡಿಚಿತ್ರ

ಹೊನ್ನಮ್ಮನ ಕೆರೆಯ ಹಿಂದಿದೆ ಬಲಿದಾನದ ಕಥೆ…

Photo Credit :

ಹೊನ್ನಮ್ಮನ ಕೆರೆಯ ಹಿಂದಿದೆ ಬಲಿದಾನದ ಕಥೆ...

ಹಿಂದಿನ ಕಾಲದಲ್ಲಿ ಕೆರೆ ನಿರ್ಮಾಣದ ನಂತರ ಅದರಲ್ಲಿ ನೀರು ಬಾರದೆಯಿದ್ದರೆ ಹೆಣ್ಣುಮಗಳನ್ನು ಬಲಿದಾನ ನೀಡುತ್ತಿದ್ದ ಕಥೆಗಳು ನಮ್ಮ ಮುಂದಿವೆ. ಊರಿನ ಉದ್ಧಾರಕ್ಕಾಗಿ ಕೆರೆಗೆ ತಮ್ಮನ್ನೇ ತಾವು ಬಲಿದಾನಗೈಯ್ಯುವ ಮೂಲಕ ಚಿರಾಯುವಾಗಿ ಉಳಿದ ಕಥೆಗಳ ಪೈಕಿ ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿರುವ ಹೊನ್ನಮ್ಮನ ಕೆರೆಯೂ ಒಂದಾಗಿದೆ.

ಸದಾ ಪ್ರವಾಸಿಗರಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿ ಯಾವುದೇ ಸದ್ದುಗದ್ದಲವಿಲ್ಲದೆ ಉಳಿಯುವ ಹೊನ್ನಮ್ಮನ ಕೆರೆ ವರ್ಷಕ್ಕೊಮ್ಮೆ ಅಂದರೆ ಗೌರಿ ಹಬ್ಬದಂತು ಹೆಚ್ಚಿನ ಜನರ ಗಮನಸೆಳೆಯುತ್ತದೆ. ಈ ವೇಳೆ ಮುತ್ತೈದೆಯರು ಇಲ್ಲಿ ಪೂಜೆ ಸಲ್ಲಿಸಿ ಹೊನ್ನಮ್ಮನಿಗೆ ಬಾಗಿನ ಅರ್ಪಿಸುತ್ತಾರೆ.

ಹೊನ್ನಮ್ಮನ ಕೆರೆಯು ಸೋಮವಾರಪೇಟೆಯಿಂದ 6 ಕಿ.ಮೀ. ದೂರದಲ್ಲಿದೆ. ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಕೆರೆಯನ್ನು ತಲುಪಬಹುದು.

ಹೊನ್ನಮ್ಮನ ಕೆರೆ ನಿರ್ಮಾಣದ ಹಿಂದೆ ಹೆಣ್ಣುಮಗಳೊಬ್ಬಳ ಬಲಿದಾನದ ಕಥೆಯಿದ್ದು ಅದು ಏನೆಂದರೆ? 1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ. ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದನಂತೆ. ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತಂತೆ ಆಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ  ಉಂಟಾಯಿತಂತೆ.  ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವಂತೆ. ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತಂತೆ. ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು. ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಈ ಸಂದರ್ಭ ಮುತ್ತೈದೆ ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನೀರು ಬರುತ್ತೆ ಎಂಬ ಅಶರೀರವಾಣಿಯೊಂದು ಆತನಿಗೆ ಕೇಳಿಬಂತಂತೆ. ಆದರೆ ಕೆರೆಗೆಹಾರ ನೀಡುವುದಾದರೂ ಯಾರನ್ನು ಎಂದು ಮಲ್ಲೇಗೌಡ ಯೋಚಿಸುತ್ತಾ ದಿನಕಳೆಯುತ್ತಿರುತ್ತಾನೆ. ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ಹಾರಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬಂತಂತೆ. ಇದನ್ನು ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ಹೊನ್ನಮ್ಮನ ಪತಿ ಶಾಂತರಾಜುಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಟ್ಟನಂತೆ.

ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ.

ನಾಡಿನ ಜನತೆಗಾಗಿ ಹೊನ್ನಮ್ಮ ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧುವರರು ಹಾಗೂ ಮುತ್ತೈದರು ಬಾಗಿನ ಅರ್ಪಿಸುತ್ತಾರೆ. ಅಲ್ಲದೆ, ನವದಂಪತಿಗಳು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು